ಕೊಡಗು : Tulu Times | ಪ್ರವಾಸಿಗರನ್ನು ಸೆಳೆಯುವ ಪ್ರಮುಖ ತಾಣ ಹಾಗೂ ಕೊಡಗಿನ ಹೃದಯಭಾಗದಲ್ಲಿರುವ ಪ್ರಸಿದ್ಧ ಪ್ರವಾಸಿ ಕೇಂದ್ರವೇ ದುಬಾರೆ ಆನೆ ಶಿಬಿರ. ಕಾವೇರಿ ನದಿಯ ತಟದಲ್ಲಿರುವ ದುಬಾರೆ, ಪ್ರಕೃತಿ ಮತ್ತು ವನ್ಯಜೀವಿಗಳ ಅಪರೂಪದ ಅನುಭವವನ್ನು ನೀಡುವ ಸ್ಥಳವಾಗಿದೆ. ದುಬಾರೆ ಸುತ್ತಮುತ್ತ ದಟ್ಟ ಅರಣ್ಯ, ಪಕ್ಷಿ ಸಂಕುಲ ಮತ್ತು ವಿವಿಧ ವನ್ಯಜೀವಿಗಳು ಕಂಡುಬರುತ್ತವೆ. ಇದು ಪಶ್ಚಿಮ ಘಟ್ಟಗಳ ಜೀವ ವೈವಿಧ್ಯತೆಯ ಭಾಗವಾಗಿದ್ದು, ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ಕೇಂದ್ರವಾಗಿಯೂ ಗುರುತಿಸಲಾಗಿದೆ.
ದುಬಾರೆ ಮಡಿಕೇರಿಯಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿದ್ದು, ರಸ್ತೆ ಮಾರ್ಗವಾಗಿ ಸುಲಭವಾಗಿ ತಲುಪಬಹುದು. ಪ್ರವಾಸಕ್ಕೆ ಸೂಕ್ತ ಸಮಯವೆಂದರೆ ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ. ಅಲ್ಲದೇ ಇಲ್ಲಿ, ಸುರಕ್ಷತೆ ಮತ್ತು ವನ್ಯಜೀವಿಗಳ ರಕ್ಷಣೆಯ ದೃಷ್ಟಿಯಿಂದ ಅರಣ್ಯ ಇಲಾಖೆ ನಿಗದಿಪಡಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯವಾಗಿದೆ.
ತೂಗು ಸೇತುವೆಯ ನಿರ್ಮಾಣದ ಬಗ್ಗೆ ಚರ್ಚೆ ;
ಇದೀಗ ದುಬಾರೆಯಲ್ಲಿ ಬಿಸಿ ಸುದ್ದಿಯಾಗುತ್ತಿರುವ ತೂಗು ಸೇತುವೆಯ ನಿರ್ಮಾಣದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಹೌದು… ದುಬಾರೆಯಲ್ಲಿ ತೂಗು ಸೇತುವೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ. ದುಬಾರೆ ತೂಗು ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಇದೀಗ ಅಂದಾಜು 7.2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಲೋಕೋಪಯೋಗಿ ಇಲಾಖೆ ಇದರ ನಿರ್ಮಾಣ ಜವಾಬ್ದಾರಿ ವಹಿಸಿಕೊಂಡಿದೆ ಎನ್ನಲಾಗಿದೆ.
ಈ ಹಿಂದೆ ಮಂಗಳೂರಿನಿಂದ ಬಂದ ತಜ್ಞರ ತಂಡ ಸೇತುವೆಯನ್ನು ಮರುವಿನ್ಯಾಸಗೊಳಿಸಿದ್ದು, ಸೇತುವೆ ಒಟ್ಟು 190 ಮೀ. ಉದ್ದ ಮತ್ತು 1.5 ಮೀ. ಅಗಲವಿರಲಿದೆ. ಈ ಸಂಬಂಧ ಇನ್ನಷ್ಟು ತಾಂತ್ರಿಕ ಕೆಲಸಗಳು ಬಾಕಿ ಇವೆ ಎಂದು ಪಿಡಬ್ಲ್ಯೂಡಿ ಇಲಾಖೆ ಎಂಜಿನಿಯರ್ ಅರ್ಬಾಜ್ ಅಹ್ಮದ್ ಮಾಹಿತಿ ನೀಡಿದ್ದಾರೆ. ಇನ್ನು ಕೆಲವು ತಾಂತ್ರಿಕ ಪ್ರಕ್ರಿಯೆಗಳು ಬಾಕಿ ಉಳಿದಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ ಎಂಬುವುದು ವರದಿಯಾಗಿದೆ. ಒಟ್ಟಾರೆಯಾಗಿ ಪ್ರವಾಸಿಗರಿಗೆ ಹಾಗೂ ಅಲ್ಲಿ ವಾಸ ಮಾಡುತ್ತಿರುವ ಗಿರಿಜನರಿಗೆ ಸೇತುವೆಯಿಂದ ಬಹಳ ಉಪಯೋಗವಿದ್ದು, ಮಳೆಗಾಲದಲ್ಲಿ ತೊಂದರೆ ಅನುಭವಿಸುತ್ತಿರುವವರಿಗೆ ಸೇತುವೆ ನಿರ್ಮಾಣದಿಂದ ಉಪಯೋಗವಾಗಲಿದೆ.
ಇದನ್ನೂ ಓದಿ :ಬೆಳ್ತಂಗಡಿ: 36 ವರ್ಷಗಳಿಂದ ಎಸ್ಕೇಪ್ ಆಗಿದ್ದ ಖದೀಮ ಅರೆಸ್ಟ್ !
=======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/emwzylibjoc?si=Sca-qvxtKSUITymq











