ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಅಂಗಾಂಗ ಕಸಿ ಸೇರಿದಂತೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಬಗ್ಗೆ ಚರ್ಚೆ : ಸಚಿವ ಸಂಪುಟ

ಬೆಂಗಳೂರು : Tulu Times| ರಾಜ್ಯ ಸರ್ಕಾರದ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವ ಪ್ರಮುಖ ವೇದಿಕೆಯಾಗಿರುವ ಸಚಿವ ಸಂಪುಟ ಸಭೆ ಜ.02 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ರಾಜ್ಯದ ಅಭಿವೃದ್ಧಿ, ಜನಹಿತ ಯೋಜನೆಗಳು, ಆರ್ಥಿಕ ನೀತಿಗಳು, ಆಡಳಿತ ಸುಧಾರಣೆ ಹಾಗೂ ಪ್ರಸ್ತುತ ಸಾಮಾಜಿಕ–ರಾಜಕೀಯ ಪರಿಸ್ಥಿತಿಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ರದ್ದುಪಡಿಸಿ ವಿಕಸಿತ್ ಭಾರತ್ -ಗ್ಯಾರಂಟಿ ಫಾರ್ ರೋಜ್ಗಾರ್ & ಆಜೀವಿಕ ಮಿಷನ್ (ಗ್ರಾಮೀಣ) ಕಾಯ್ದೆ 2025 ಜಾರಿಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಲು ನಿರ್ಣಯ ಕೈಗೊಂಡಿತು. ಈ ಕ್ರಮವು ಅಧಿಕಾರ ವಿಕೇಂದ್ರೀಕರಣ ಮತ್ತು ಗ್ರಾಮ ಪಂಚಾಯತಿಗಳಿಗೆ ನೀಡಲಾಗಿದ್ದ ಅಭಿವೃದ್ಧಿ ಅಧಿಕಾರವನ್ನು ಬುಡಮೇಲು ಮಾಡುವ ಪ್ರಯತ್ನ ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಯಿತು. ಜೊತೆಗೆ, ಕರ್ನಾಟಕ ಲೋಕಾಯುಕ್ತ (ತಿದ್ದುಪಡಿ) ವಿಧೇಯಕ, 2025ಕ್ಕೆ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನಲ್ಲಿ 40.00 ಕೋಟಿ ರೂ. ವೆಚ್ಚದಲ್ಲಿ 100 ಹಾಸಿಗೆಗಳ ಹೊಸ ಸಾರ್ವಜನಿಕ ಆಸ್ಪತ್ರೆ ನಿರ್ಮಾಣಕ್ಕೂ, ಬೆಂಗಳೂರು ಉಪನಗರ ಸಾರಿಗೆ ಯೋಜನೆಯ ಕಾರಿಡಾರ್ 2 ಮತ್ತು 4ರ 16876.00 ಕೋಟಿ ರೂ.ಗಳ ಪರಿಷ್ಕೃತ ವೆಚ್ಚಕ್ಕೂ, ಮತ್ತು ಆರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳನ್ನು ಉತ್ಕೃಷ್ಟ ಸಂಸ್ಥೆಗಳನ್ನಾಗಿ ಉನ್ನತೀಕರಿಸಲು 36.90 ಕೋಟಿ ರೂ.ಗಳ ಕಾಮಗಾರಿಗಳಿಗೂ ಅನುಮೋದನೆ ನೀಡಲಾಯಿತು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರಿ ಶಾಲೆಗಳಲ್ಲಿ ಸಮುದಾಯ ಮತ್ತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನೀತಿಗೆ (CCSR Policy) ಅನುಮೋದನೆ ನೀಡಲಾಗಿದೆ. ಬೆಂಗಳೂರಿನ ಯಲಹಂಕದಲ್ಲಿ 153 ಎಕರೆ ಪ್ರದೇಶದಲ್ಲಿ 50.29 ಕೋಟಿ ರೂ. ವೆಚ್ಚದಲ್ಲಿ ‘ವಿಶ್ವಗುರು ಬಸವಣ್ಣ ಜೀವ ವೈವಿಧ್ಯ ಬೃಹತ್ ಉದ್ಯಾನವನ’ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಅಲ್ಲದೆ, ಬೆಂಗಳೂರಿನ IGOT ಸಂಸ್ಥೆಗೆ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ಆವರಣದಲ್ಲಿ 10 ಎಕರೆ ಜಮೀನನ್ನು 99 ವರ್ಷಗಳ ಗುತ್ತಿಗೆಗೆ ನೀಡಿ, ಅಂಗಾಂಗ ಕಸಿ ಸೇರಿದಂತೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅಜೀಮ್ ಪ್ರೇಮ್ಜಿ ಫೌಂಡೇಷನ್ ಜೊತೆ ಒಪ್ಪಂದ ಮಾಡಿಕೊಳ್ಳಲು ಸಚಿವ ಸಂಪುಟ ನಿರ್ಣಯಿಸಿದೆ. 2025-26ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ 41685 ಪೀಠೋಪಕರಣಗಳನ್ನು 35.32 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು, 100 ಪಶುವೈದ್ಯಕೀಯ ಸಂಸ್ಥೆಗಳ ನೂತನ ಕಟ್ಟಡಗಳನ್ನು 50.00 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು, ಹಾಗೂ ಐಐಟಿ ಹೈದರಾಬಾದ್ ಸಹಯೋಗದೊಂದಿಗೆ 19.00 ಕೋಟಿ ರೂ. ವೆಚ್ಚದಲ್ಲಿ ‘ಕರ್ನಾಟಕ ಜಿಎಸ್ ಟಿ ಅನಲೈಟಿಕ್ಸ್ ಪೋರ್ಟಲ್’ ಅಭಿವೃದ್ಧಿಪಡಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು ಇನ್ನು ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು.

Discussion on construction of super specialty hospital including organ transplant: Cabinet – ತುಳು ಟೈಮ್ಸ್

ಇದನ್ನೂ ಓದಿ :ಧರ್ಮಶಾಲಾದಲ್ಲಿ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ರ‍್ಯಾಗಿಂಗ್

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/emwzylibjoc?si=odtczmtszn91Oug8

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page