ಬೆಂಗಳೂರು: Tulu Times | ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಾಂತೇಶ್ ಬೀಳಗಿ ಅವರ ನಿಧನದ ನಂತರ ಇದೀಗ ಅವರ ಮಗಳಿಗೆ ಅನುಕಂಪದ ಆಧಾರದಲ್ಲಿ ಹುದ್ದೆ ನೀಡಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಪುತ್ರಿ ಚೈತನ್ಯ ಅವರಿಗೆ ವಿಶೇಷ ಪ್ರಕರಣದಡಿ ಸಚಿವಾಲಯದಲ್ಲಿ ಅನುಕಂಪದ ಆಧಾರದಲ್ಲಿ ಸಿ ದರ್ಜೆ ಸಹಾಯಕಿ ಹುದ್ದೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಮಹಾಂತೇಶ್ ಬೀಳಗಿ ಕುಟುಂಬದವರಿಗೆ ಅನುಕಂಪದ ಹುದ್ದೆ ನೀಡುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಚೈತನ್ಯ ಅವರಿಗೆ ಅನುಕಂಪದ ಆಧಾರದ ಮೇಲೆ ಗ್ರೂಪ್ ಸಿ ಹುದ್ದೆ ನೀಡಲು ಸಂಪುಟ ಸಭೆ ಅನುಮೋದನೆ ನೀಡಿದೆ.
ಹಲವು ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ, ಜಿಲ್ಲಾಧಿಕಾರಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದರು. ಮಹಾಂತೇಶ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಎಲ್ಲ ಕಡೆಗಳಲ್ಲಿಯೂ ತಮ್ಮ ದಕ್ಷತೆಯಿಂದಾಗಿ ಹೆಜ್ಜೆ ಗುರುತುಗಳನ್ನು ಉಳಿಸಿ ಹೋಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಸ್ಮರಿಸಿದ್ದಾರೆ. ಮಹಾಂತೇಶ್ ಬೀಳಗಿ ಅವರು ರಸ್ತೆ ಅಪಘಾತದಲ್ಲಿ ನಿಧನರಾದ ಸುದ್ದಿ ಇಡೀ ಕರ್ನಾಟಕಕ್ಕೆ ನೋವು ತಂದಿತ್ತು.
ಇದನ್ನೂ ಓದಿ: ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಮಾಡಿದ ರಣವೀರ್ ನಟನೆಯ ‘ಧುರಂಧರ್’
ಸರ್ಕಾರಕ್ಕೆ ಮನವಿ ಸಲ್ಲಿಸಿದ ಬಿ. ವೈ ವಿಜಯೇಂದ್ರ!
ಇನ್ನು ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬೀಳಗಿಯವರ ಕುಟುಂಬದ ಸದಸ್ಯರೊಬ್ಬರಿಗೆ ಕ್ಲಾಸ್-1 ಅಧಿಕಾರಿ ಹುದ್ದೆ ನೀಡಬೇಕು ಎಂದು ಆಗ್ರಹಿಸಿದ್ದರು. ಈ ಹಿಂದೆ ಇಂತಹ ಸಂದರ್ಭಗಳಲ್ಲಿ ಅಗಲಿದ ಅಧಿಕಾರಿಗಳ ಕುಟುಂಬ ವರ್ಗದವರಿಗೆ ಅಧಿಕಾರಿ ಹುದ್ದೆ ನೀಡಿದ ನಿದರ್ಶನಗಳಿವೆ.ಹೀಗಾಗಿ, ಬೀಳಗಿಯವರ ಕುಟುಂಬದ ಒಬ್ಬರಿಗೆ ಕ್ಲಾಸ್-1 ಅಧಿಕಾರಿ ಹುದ್ದೆ ನೀಡಬೇಕು ಎಂದು ಸಿಎಂಗೆ ಮನವಿ ಸಲ್ಲಿಸಿದ್ದರು. ರಾಜ್ಯ ಸರ್ಕಾರ ಶೀಘ್ರದಲ್ಲಿ ಪೂರಕವಾಗಿ ಮಾನವೀಯ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದಿದ್ದಾರೆ.
ಮಹಾಂತೇಶ್ ಬೀಳಗಿ ಮೃತಪಟ್ಟಿದ್ದು ಹೇಗೆ..?
ನವೆಂಬರ್ 25ರಂದು ಕಲಬುರಗಿ ಬಳಿಯ ಜೇವರ್ಗಿ ಸಮೀಪದ ಗೌನಳ್ಳಿ ಕ್ರಾಸ್ ಬಳಿ ಭೀಕರ ಕಾರು ಅಪಘಾತದಲ್ಲಿ ಮಹಾಂತೇಶ್ ಬೀಳಗಿ ಮೃತಪಟ್ಟರು. ವಿಜಯಪುರದಿಂದ ಕಲಬುರಗಿಗೆ ಹೋಗುತ್ತಿದ್ದ ವೇಳೆ ಅವರಿದ್ದ ಇನ್ನೋವಾ ಕಾರು ಅಪಘಾತಕ್ಕೀಡಾಗಿ ಕಾರಿನಲ್ಲಿದ್ದ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವನ್ನಪ್ಪಿದ್ದರು. ದಾರಿ ಮಧ್ಯೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿತ್ತು. ಇನ್ನು ಮಹಾಂತೇಶ್ ಬೀಳಗಿ ಅವರಿಗೆ ಅಪಾರ ಅಭಿಮಾನಿ ಬಳಗವೂ ಇದೆ.
Senior IAS officer Mahantesh Bilagi’s daughter gets compassionate appointment- ತುಳುಟೈಮ್ಸ್











