Mangaluru: ಯಕ್ಷರಂಗ ಕ್ಷೇತ್ರದಲ್ಲಿ ಅಗ್ರಗಣ್ಯ ಸಾಧನೆಗೈದು, ಯಕ್ಷಲೋಕದಲ್ಲಿ ರಸರಾಗ ಚಕ್ರವರ್ತಿ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ಭಾಗವತ ದಿನೇಶ್ ಅಮ್ಮಣ್ಣಾಯ (65) ವಿಧಿವಶರಾಗಿದ್ದಾರೆ. ಬೆಳ್ತಂಗಡಿಯ ಅರಸಿನಮಕ್ಕಿಯ ಸ್ವಗೃಹದಲ್ಲಿ ದಿನೇಶ್ ಅಮ್ಮಣ್ಣಾಯ ಕೊನೆಯುಸಿರೆಳೆದಿದ್ದಾರೆ.
ಕಂಚಿನ ಕಂಠ ಹಾಗೂ ವಿಶಿಷ್ಟ ರಾಗ ಸಂಯೋಜನೆಯ ಮೂಲಕ ಜನಮಾನಸ ತಲುಪಿದ್ದರು. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಯಕ್ಷಲೋಕದಲ್ಲಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರ ಅಗಲಿಕೆಯಿಂದ ಯಕ್ಷಗಾನ ಲೋಕಕ್ಕೆ ತುಂಬಲಾಗದ ನಷ್ಟವಾಗಿದೆ.
ಯಕ್ಷ ಪರಂಪರೆಯ ಹಿರಿಯ ಭಾಗವತರಾಗಿ ನಾಲ್ಕು ದಶಕಕ್ಕೂ ಹೆಚ್ಚು ಕಾಲ ಕಲಾ ಸೇವೆ ಸಲ್ಲಿಸಿದ್ದ ಅಮ್ಮಣ್ಣಾಯರು ‘ರಸರಾಗ ಚಕ್ರವರ್ತಿ’ ಎಂಬ ಬಿರುದು ಹೊಂದಿದ್ದರು.
ಆರಂಭದಲ್ಲಿ ದಾಮೋದರ ಮಂಡೆಚ್ಚರ ಗರಡಿಯಲ್ಲಿ ಪುತ್ತೂರು ಮೇಳದಲ್ಲಿ ಚಂಡೆ – ಮದ್ದಳೆ ವಾದಕರಾಗಿ ಯಕ್ಷರಂಗಕ್ಕೆ ಕಾಲಿಟ್ಟರು. ಆ ನಂತರ ಭಾಗವತಿಕೆಯತ್ತ ಆಸಕ್ತಿ ಹೊಂದಿ ಪ್ರಖ್ಯಾತ ಭಾಗವತರಾಗಿ ಹೊರಹೊಮ್ಮಿದರು.
ಪ್ರಸಿದ್ಧ ಡೇರೆ ಮೇಳವಾಗಿದ್ದ ಕರ್ನಾಟಕ ಮೇಳದಲ್ಲಿ ದಿಗ್ಗಜ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಹೆಗ್ಗಳಿಕೆ ಅಮ್ಮಣ್ಣಾಯರಿಗೆ ಸಲ್ಲುತ್ತದೆ. ಪೌರಾಣಿಕ ಹಾಗೂ ತುಳು ಪ್ರಸಂಗಗಳಿಗೆ ತನ್ನ ಕಂಠ ಮಾಧುರ್ಯದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು.
‘ಕಾಡಮಲ್ಲಿಗೆ’, ‘ಕಚ್ಚೂರ ಮಾಲ್ದಿ’, ‘ಪಟ್ಟದ ಪದ್ಮಲೆ’ ‘ಮಾನಿಷಾದ’ ದಂತಹ ಪ್ರಸಂಗಗಳಲ್ಲಿ ತಮ್ಮ ಅತ್ಯದ್ಭುತ ಗಾಯನದಿಂದ ಜನಪ್ರಿಯಗೊಳಿಸಿಕೊಂಡರು. ‘ಸತ್ಯಹರಿಶ್ಚಂದ್ರ’ ಪ್ರಸಂಗದ ಹಾಡುಗಳಿಗೆ ಸಹಸ್ರಾರು ಅಭಿಮಾನಿಗಳಿದ್ದರು.

ಎಡನೀರು ಮಠದ ಪರಮಶಿಷ್ಯರಾದ ದಿನೇಶ್ ಅಮ್ಮಣ್ಣಾಯರು ತಮ್ಮ ಜೀವನ ಅತೀ ಹೆಚ್ಚು ಯಕ್ಷಗಾನ ಭಾಗವತಿಕೆಯನ್ನು ಎಡನೀರು ಮಠದ ಮೇಳ ಹಾಗೂ ಎಡನೀರು ಕ್ಷೇತ್ರದಲ್ಲೇ ಮಾಡಿರುವುದು ವಿಶೇಷ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ತಮ್ಮ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಅವರ ಅನುಪಮ ಕಲಾ ಸೇವೆಗೆ ಉಡುಪಿ ತುಳುಕೂಟವು ಪ್ರತಿಷ್ಠಿತ ‘ಸಾಮಗ ಪ್ರಶಸ್ತಿ’ ನೀಡಿ ಗೌರವಿಸಿದೆ. ಅಪಾರ ಅನುಭವ ಹೊಂದಿದ್ದ ಅವರು, ಇತ್ತೀಚಿನ ದಿನಗಳಲ್ಲಿ ಹವ್ಯಾಸಿ ಭಾಗವತರಾಗಿ ಕಲಾ ಸೇವೆಯನ್ನು ಮುಂದುವರೆಸಿದ್ದರು.
ಇದನ್ನೂ ಓದಿ: Kollam: ಮಗುವಿಗೆ ಜನ್ಮವಿತ್ತ ಬಾಲಕಿ – ತಾಯಿಯ ಸ್ನೇಹಿತನಿಂದ ಕೃತ್ಯ
ವೀಡಿಯೋ ಸುದ್ದಿಗಳನ್ನು ವೀಕ್ಷಿಸಲು ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ Subscribe ಮಾಡಿ:https://www.youtube.com/watch?v=JJgZvG3Eep4











