ಬೆಂಗಳೂರು: Tulu Times | ಹುಟ್ಟಿದ ಸೂರ್ಯ ಮುಳುಗಲೇ ಬೇಕು. ಮಹಾತ್ಮ ಗಾಂಧಿ ಅವರ ಹೆಸರನ್ನು ತೆಗೆಯುವುದರ ಮೂಲಕ ಕೇಂದ್ರ ಬಿಜೆಪಿ ಸರ್ಕಾರದ ಕೊನೆಯ ದಿನಗಳು ಪ್ರಾರಂಭವಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು. ಆರ್ಟಿಕಲ್ 21 ರ ಮೂಲಕ ಸಾಂವಿಧಾನಿಕವಾಗಿ ಕಾಂಗ್ರೆಸ್ ಪಕ್ಷ ನೀಡಿದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಕಾರ್ಯಕ್ರಮವನ್ನು ಬಿಜೆಪಿ ಮುಟ್ಟುವ ಧೈರ್ಯ ಮಾಡುತ್ತದೆ ಎಂದುಕೊಂಡಿರಲಿಲ್ಲ. ಆದರೆ ಈಗ ಮನರೇಗಾ ಹೆಸರನ್ನು ಬದಲಾವಣೆ ಮಾಡಲು ಹೊರಟಿರುವುದು ನೋಡಿದರೆ ಬಿಜೆಪಿಯ ಅಂತ್ಯ ಪ್ರಾರಂಭವಾಗಿದೆ ಎಂದು ನನಗೆ ಅನಿಸುತ್ತಿದೆ ಎಂದರು.
ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ದೆಹಲಿಯಲ್ಲಿ ಮಂಗಳವಾರ ಸಭೆ ಕರೆದಿದ್ದಾರೆ. ಇಲ್ಲಿ ಇದರ ಬಗ್ಗೆ ಚರ್ಚೆ ನಡೆಸಲಾಗುವುದು. ಕೇಂದ್ರ ಸರ್ಕಾರ ಹೇಳಿದ ಅನುಪಾತದಲ್ಲಿ ಯಾವ ರಾಜ್ಯ ಸರ್ಕಾರವೂ ಹಣ ನೀಡಲು ಸಾಧ್ಯವಿಲ್ಲ. ಈ ರೀತಿ ಆದರೆ ಕಾರ್ಯಕ್ರಮ ಸತ್ತು ಹೋದಂತೆ. ಇದನ್ನು ಸಮಾಧಿ ಮಾಡಲಾಗಿದೆ. ಕೊಲೆ ಮಾಡಲಾಗಿದೆ” ಎಂದರು.
ಸರ್ಕಾರ ಮತ್ತು ಪಕ್ಷ ಒಟ್ಟಾಗಿ ಹೋರಾಡಲಿದೆ!
“ಸರ್ಕಾರ ಮತ್ತು ಪಕ್ಷ ಒಟ್ಟಾಗಿ ನರೇಗಾ ಯೋಜನೆಯ ವಿರುದ್ದ ಕೇಂದ್ರ ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ವಿರೋಧಿಸಿ ಹೋರಾಟ ಮಾಡುತ್ತೇವೆ. ಇದು ರಾಷ್ಟ್ರೀಯ ವಿಚಾರ. ಈ ದೇಶದ ಗ್ರಾಮ ಪಂಚಾಯತಿಗಳನ್ನು ಸುಭದ್ರಗೊಳಿಸಿದ್ದು ಕಾಂಗ್ರೆಸ್ ಸರ್ಕಾರ. ರಾಜೀವ್ ಗಾಂಧಿ ಅವರು ತಂದ 73,74 ನೇ ತಿದ್ದುಪಡಿ ಮೂಲಕ ಅಧಿಕಾರ ವಿಕೇಂದ್ರೀಕರಣ ಮಾಡಿದರು” ಎಂದರು. ಇದರ ವಿರುದ್ಧ ಜನಾಭಿಪ್ರಾಯ ರೂಪಿಸಲಾಗುವುದು. ಅನ್ಯಾಯದ ಬಗ್ಗೆ ತಿಳಿಸಲಾಗುವುದು. ಹೆಸರು ಬದಲಾವಣೆ ತೀರ್ಮಾನವನ್ನು ವಾಪಸ್ ಪಡೆಯುವ ತನಕ ಹೋರಾಟ ನಡೆಸಲಾಗುವುದು. ಕಾಂಗ್ರೆಸ್ ಪಕ್ಷ ದೇಶದ ಜನಸಾಮಾನ್ಯರ ಪರವಾಗಿ ನಿಲ್ಲಲಿದೆ. ಜನರ ಹಕ್ಕನ್ನು ಕಾಪಾಡುವುದು ನಮ್ಮ ಕರ್ತವ್ಯ. ಚುನಾವಣೆಗಳು ಬರುತ್ತವೆ ಹೋಗುತ್ತವೆ. ಸೋಲು, ಗೆಲುವು ಇದ್ದಿದ್ದೆ” ಎಂದರು.
ಕೇಂದ್ರ ಸರ್ಕಾರ ಕೊಲೆ ಮಾಡಲು ಹೊರಟಿದೆ
ಈ ಮೊದಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮವಾಗಿ ಶೇ 90:10 ಅನುಪಾತದಲ್ಲಿ ಅನುದಾನ ನೀಡಬೇಕಿತ್ತು. ಈಗ ಶೇ 60:40 ಅನುಪಾತ ತಂದು ಈ ಯೋಜನೆಯನ್ನು ಸಾಯಿಸಲಾಗುತ್ತಿದೆ. ಮಹಾತ್ಮಾ ಗಾಂಧಿ ಅವರ ಹೆಸರಿನಲ್ಲಿರುವ ಯೋಜನೆಯನ್ನು ಕೊಲೆ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ. ದೇಶದ ಎಲ್ಲಾ ಪ್ರಜಾ ಪ್ರತಿನಿಧಿಗಳಿಗೆ ಶಾಕಿಂಗ್ ವಿಚಾರ” ಎಂದರು.
“ಬಳ್ಳಾರಿ ಪಾದಯಾತ್ರೆ ಸಮಯದಲ್ಲಿ ಒಂದು ಕಡೆ ಮಹಿಳೆಯರು ಒಂದಷ್ಟು ವಿಚಾರಗಳನ್ನು ಈ ಯೋಜನೆ ಬಗ್ಗೆ ಹೇಳಿದರು. ಆಗ ಸಿ.ಪಿ.ಜೋಶಿ ಸಚಿವರಿದ್ದರು. ಆ ಮಹಿಳೆಯರು ತಿಳಿಸಿದ ವಿಚಾರಗಳನ್ನು ತಿಳಿಸಿ ಬೇರೆಯವರ ಜಮೀನಿನಲ್ಲಿ ಒಂದಷ್ಟು ಜನರಿಗೆ ಕೆಲಸ ಮಾಡಲು ನಾಚಿಕೆ ಇರುತ್ತದೆ ಎಂದು ಸೋನಿಯಾ ಗಾಂಧಿ ಅವರಿಗೆ ಇದರ ಬಗ್ಗೆ ತಿಳಿಸಿದೆ. ಅವರು ಸಚಿವರಿಗೆ ಗಮನಿಸಲು ಸೂಚಿಸಿದರು. ಆ ನಂತರ ಸ್ವಂತ ಜಮೀನಿನಲ್ಲಿ ಈ ಯೋಜನೆ ಅಡಿ ಕೆಲಸ ಮಾಡಬಹುದು ಎಂದು ತಿದ್ದುಪಡಿ ಮಾಡಲಾಯಿತು” ಎಂದರು.
Cutting Gandhiji’s name, BJP’s final days have begun: DCM D.K. Shivakumar- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











