ಸುರತ್ಕಲ್ – ತುಳು ಟೈಮ್ಸ್: ವೃದ್ಧೆಯೊಬ್ಬರ ಮನೆಗೆ ನುಗ್ಗಿ ಚಿನ್ನ, ನಗದು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಶೈನ್ ಎಚ್. ಪುತ್ರನ್ ಅಲಿಯಾಸ್ ಶಯನ್, ವಿನೋದ್ ಅಲಿಯಾಸ್ ಕೋತಿ ಹಾಗೂ ಗಿರೀಶ್ ಅಲಿಯಾಸ್ ಸೈಕಲ್ ಗಿರಿ ಬಂಧಿತ ಆರೋಪಿಗಳು. ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಡಿಸೆಂಬರ್ 3ರಂದು ಸುರತ್ಕಲ್‌ನ ಮುಕ್ಕಾ ನಿವಾಸಿ ವೃದ್ಧೆ ಜಲಜ ( 85 ವರ್ಷ) ಅವರ ಮನೆಗೆ ನುಗ್ಗಿ ದರೋಡೆ ನಡೆದಿತ್ತು. ಅಪರಿಚಿತರು ಕುಡಿಯಲು ನೀರು ಕೇಳಿ ಬಾಗಿಲು ತೆರೆಯುವಂತೆ ಹೇಳಿದ್ದಾರೆ. ಈ ವೇಳೆ ಬಾಗಿಲು ತೆಗೆಯದ ಕಾರಣ ಮನೆಯ ಹಂಚು ತೆಗೆದು ಅಕ್ರಮವಾಗಿ ಒಳಪ್ರವೇಶಿಸಿದ್ದಾರೆ. ಆರೋಪಿಗಳು ಬೆದರಿಸಿ, ವೃದ್ಧೆಯ ಕುತ್ತಿಗೆಗೆ ಬೈರಾಸು ಬಿಗಿದು, ಗೋಡ್ರೇಜ್‌ನಲ್ಲಿದ್ದ ಸುಮಾರು 16 ಗ್ರಾಂ ಚಿನ್ನದ ಸರ, 20 ಗ್ರಾಂ ಎರಡು ಚಿನ್ನದ ಬಳೆ, ಹಾಗೂ 14 ಸಾವಿರ ರೂಪಾಯಿ ಹಣ ದೋಚಿ ಪರಾರಿಯಾಗಿದ್ದರು. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಇದನ್ನೂ ಓದಿ: ಮಂಗಳೂರಿನ ಆರ್‌ಟಿಒ ಕಚೇರಿಗೆ ಬಾಂಬ್ ಬೆದರಿಕೆ
ಹಾಡಹಗಲೇ ನಡೆದಿದ್ದ ಈ ಕಳ್ಳತನ ಪ್ರಕರಣವನ್ನು ಪೊಲೀಸರು ವಿವಿಧ ಆಯಾಮದಲ್ಲಿ ತನಿಖೆ ನಡೆಸಿದ್ದರು. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಶೈನ್ ಎಚ್. ಪುತ್ರನ್ ಅಲಿಯಾಸ್ ಶಯನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಶೈನ್ ಈ ಕೃತ್ಯವನ್ನು ಕಾರ್ಕಳದ ಜೈಸನ್ ಅಲಿಯಾಸ್ ಲೆನ್ಸನ್ ಜೊತೆಗೆ ದರೋಡೆ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಕಳವಾದ ಚಿನ್ನವನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಿದ್ದಾರೆ. ಈ ಮಾಹಿತಿ ಆಧರಿಸಿ, ಪೊಲೀಸರು ಬೆಂಗಳೂರಿಗೆ ತೆರಳಿ ವಿನೋದ್ ಅಲಿಯಾಸ್ ಕೋತಿ ಹಾಗೂ ಗಿರೀಶ್ ಅಲಿಯಾಸ್ ಸೈಕಲ್ ಗಿರಿ ಎಂಬವರನ್ನು ಸೆರೆಹಿಡಿದಿದ್ದಾರೆ.
ಆರೋಪಿತಗಳಿಂದ 4 ಲಕ್ಷ 43 ಸಾವಿರ ರೂಪಾಯಿ ಮೌಲ್ಯದ ಚಿನ್ನ, ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್, ಮೂರು ಮೊಬೈಲ್ ಫೋನ್‌ಗಳು ಹಾಗೂ 3 ಸಾವಿರ ರೂಪಾಯಿ ಹಣವನ್ನು ವಶಕ್ಕೆ ಪಡೆದಿದ್ದಾರೆ. ಕೃತ್ಯದಲ್ಲಿ ನೇರವಾಗಿ ಭಾಗಿಯಾದ ಆರೋಪಿ ಜೈಸನ್ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗೆ ಶೋಧಕಾರ್ಯ ಮುಂದುವರಿದಿದೆ. ಆರೋಪಿಗಳನ್ನು ಡಿ. 15ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Surathkal police have arrested three persons in connection with a house burglary reported from Mukka Mithrapatna, where gold ornaments and cash were stolen after the accused broke into the house of an elderly woman, Jalaja, on December 3. Tulu Times
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/@tulutimess











