Davanagere: ಕೆಮ್ಮು ನಿವಾರಕ ಕೋಲ್ಡ್ರಿಫ್ ಸಿರಪ್ ಸೇವಿಸಿ 14 ಮಕ್ಕಳು ಮೃತಪಟ್ಟ ಘಟನೆಯ ಮಧ್ಯೆಯೇ ಮತ್ತೊಂದು ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಮಾದಕ ವ್ಯಸನಿಗಳು ನಶೆಗಾಗಿ ಕೆಮ್ಮು ಸಿರಪ್ ಬಳಕೆ ಮಾಡಿದ್ದಾರೆ ಎಂಬ ಸ್ಪೋಟಕ ಅಂಶ ಪತ್ತೆಯಾಗಿದೆ.
ರಾಜ್ಯದಲ್ಲಿ ಕೆಮ್ಮು ಸಿರಪ್‌ನಿಂದ ಮಕ್ಕಳ ಸರಣಿ ಸಾವು ಮಧ್ಯೆ ಮತ್ತೊಂದು ಆಘಾತಕಾರಿ ಬೆಳವಣಿಗೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ ಎಸ್‌ಪಿ ಕಚೇರಿಯ ಮಾದಕ ದ್ರವ್ಯ ನಿಗ್ರಹ ಪಡೆಯು ವಿಶೇಷ ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿದ್ದಾರೆ. ದಾವಣಗೆರೆಯ ದೇವರಾಜ ಅರಸು ಬಡಾವಣೆ ಫ್ಲೈ ಓವರ್ ಪಕ್ಕದ ಸರ್ವೀಸ್ ರಸ್ತೆಯಲ್ಲಿ ಅಕ್ರಮವಾಗಿ ಕೆಮ್ಮು ಸಿರಪ್ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಿದ್ದಾರೆ.
ದಾವಣಗೆರೆ ಎಸ್‌ಪಿಎಸ್ ನಗರದ ಶಿವಕುಮಾರ್, ದೇವರಾಜ ಅರಸ ಬಡಾವಣೆಯ ಮಹಮದ್ ಶಾರೀಕ್, ಮೆಹಬೂಬ್ ನಗರದ ಅಜಿಮುದ್ದೀನ್, ಹೊನ್ನೆಬಾಗಿ ನಿವಾಸಿ ಸೈಯ್ಯದ್ ಬಾಬು, ಚನ್ನಗಿರಿಯ ಆಟೋಬಾಬು ಬಂಧಿತ ಆರೋಪಿಗಳು.
ಹೊರರಾಜ್ಯದಿಂದ ಕೆಮ್ಮು ಸಿರಪ್ ತರಿಸಿ ಯುವಸಮೂಹ, ವ್ಯಸನಿಗಳನ್ನು ಟಾರ್ಗೆಟ್ ಮಾಡಿ ಸಿರಪ್ ಮಾರಾಟ ಮಾಡುತ್ತಿದ್ದರು. ಬೇರೆಯವರ ಬಳಿ ಮೆಡಿಕಲ್ ಲೈಸೆನ್ಸ್ ಖರೀದಿಸಿದ್ದ ಶಿವಕುಮಾರ್, ಆ ಲೈಸೆನ್ಸ್ ಹೆಸರಲ್ಲಿ ಹೊರರಾಜ್ಯದಿಂದ ಕೆಮ್ಮು ಸಿರಪ್ ತರಿಸಿಕೊಳ್ಳುತ್ತಿದ್ದ. 70 ರೂಪಾಯಿಯ ಒಂದು ಸಿರಪ್ ಅನ್ನು 300 ರಿಂದ 500 ರೂಪಾಯಿವರೆಗೂ ಮಾರಾಟ ಮಾಡುತ್ತಿದ್ದರು. ಯುವಕರು, ದಿನಗೂಲಿ ಕಾರ್ಮಿಕರನ್ನು ಟಾರ್ಗೆಟ್ ಮಾಡಿ ಮಾರಾಟ ಮಾಡುತ್ತಿದ್ದರು.
ಪೊಲೀಸರು ಬಂಧಿತರಿಂದ ವಿವಿಧ ಕಂಪನಿಯ 100mlನ 400 ಕೆಮ್ಮು ಸಿರಪ್, ಮಾತ್ರೆಗಳು ಜಪ್ತಿ ಮಾಡಿದ್ದಾರೆ. ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನೂ ವಶಕ್ಕೆ ಪಡೆದಿದ್ದಾರೆ. ಬಸವ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೇ ಈ ಕೆಮ್ಮು ಸಿರಪ್ ಮಾರಾಟ ಮಾಡುವಂತಿಲ್ಲ. ಆದರೆ ಇವರು ಯುವಸಮೂಹ, ವ್ಯಸನಿಗಳನ್ನು ಟಾರ್ಗೆಟ್ ಮಾಡಿ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದರು. ಸದ್ಯ ಐವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: Puttur: ಹಾಡಹಗಲೇ ಚಿನ್ನಾಭರಣ ಕಳವು – ಆರೋಪಿಯ ಬಂಧನ
ವೀಡಿಯೋ ಸುದ್ದಿಗಳನ್ನು ವೀಕ್ಷಿಸಲು ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ Subscribe ಮಾಡಿ:https://www.youtube.com/watch?v=JJgZvG3Eep4











