Bengaluru: ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ದಿನಕ್ಕೊಂದರಂತೆ ಬೆಳವಣಿಗೆಗಳು ನಡೆಯುತ್ತಲೇ ಇವೆ. ಈ ನಡುವೆ ಮುಖ್ಯಮಂತ್ರಿ ಸ್ಥಾನದ ಬದಲಾವಣೆ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಈ ವಿಚಾರ ವಿರೋಧ ಪಕ್ಷವನ್ನು ಕೆರಳಿಸಿದೆ. ಈ ಬಗ್ಗೆ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಕಿಡಿಕಾರಿದ್ದಾರೆ.
ಅಧಿಕಾರ ಹಸ್ತಾಂತರ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನಾಟಕ ಮಾಡುತ್ತಿದ್ದಾರೆ. ಈ ನಾಟಕಕ್ಕೆ ರಾಜ್ಯದ ಆರು ಕೋಟಿ ಜನರನ್ನು ಬಲಿ ಕೊಡುತ್ತಿದ್ದಾರೆ ಎಂದು ಸಚಿವ ವಿ.ಸೋಮಣ್ಣ ಕಿಡಿಕಾರಿದ್ದಾರೆ. ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಬದಲಾವಣೆ ಅವರಿಗೆ ಬಿಟ್ಟದ್ದು. ಈ ವಿಚಾರವಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಾಟಕ ಮಾಡುತ್ತಿದ್ದಾರೆ. ಅಭಿವೃದ್ಧಿ ಮಾಡಿ ಎಂದರೆ, ಬೇರೆಲ್ಲಾ ಮಾಡುತ್ತಿದ್ದಾರೆ. ಈಗಲಾದರೂ ಸ್ವಲ್ಪ ಗೌರವದಿಂದ ನಡೆದುಕೊಳ್ಳಬೇಕು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.
ಡಿಸಿಎಂ ಡಿ.ಕೆ.ಶಿವಕುಮಾರ್ ಬಳಿಕ ಸಚಿವ ವಿ.ಸೋಮಣ್ಣ ಅವರೂ ಜಾತಿ ಗಣತಿಯ ಬಗ್ಗೆ ಆಕ್ರೋಶಗೊಂಡಿದ್ದಾರೆ. ಸಮೀಕ್ಷೆಗೆ ಬಂದಿದ್ದ ಗಣತಿದಾರರ ತರೇಹವಾರಿ ಪ್ರಶ್ನೆಗಳಿಗೆ ಗರಂ ಆಗಿದ್ದಾರೆ. ವಿಜಯನಗರದಲ್ಲಿನ ಸೋಮಣ್ಣ ಅವರ ನಿವಾಸಕ್ಕೆ ಜಾತಿ ಗಣತಿ ಸಂಬಂಧ ಸುಮಾರು ಒಂಬತ್ತು ಮಂದಿ ಆಗಮಿಸಿದ್ದರು ಎನ್ನಲಾಗಿದೆ.
ಇದನ್ನು ಕಂಡ ಸೋಮಣ್ಣ ಅವರು ಇಷ್ಟು ಜನ ಏಕೆ ಬಂದಿದ್ದೀರಿ ಎಂದು ತುಸು ಬೇಸರದಿಂದಲೇ ಪ್ರಶ್ನಿಸಿದರು. ಮುಂದೆ ನಮ್ಮ ಕೇಂದ್ರ ಸರ್ಕಾರ ಗಣತಿ ಮಾಡಿಸಲಿದೆ. ಆಗ ಹೇಗೆ ಮಾಡಿಸುತ್ತೆ ನೋಡಿ. ಅದನ್ನು ಕೂಡ ನೀವೇ ಮಾಡಬೇಕಾಗುತ್ತದೆ ಎಂದಿದ್ದಾರೆ. ಸಮೀಕ್ಷೆಗೆ ಇಷ್ಟು ಪ್ರಶ್ನೆಗಳು ಬೇಕೇ? ಇದೆಲ್ಲವನ್ನೂ ನೀವೇ ಸರ್ಕಾರಕ್ಕೆ ತಿಳಿಸಬೇಕು. ಸರ್ಕಾರಿ ನೌಕರರು ಸರ್ಕಾರದ ಏಜೆಂಟ್ಗಳ ರೀತಿ ಕೆಲಸ ನಿರ್ವಹಿಸಬಾರದು ಎಂದು ಕ್ಲಾಸ್ ತೆಗೆದುಕೊಂಡರು ಎನ್ನಲಾಗಿದೆ.
ಹಲವು ಪ್ರಶ್ನೆಗಳಿಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರ ಹೆಸರನ್ನೇ ಹಾಕಿಕೊಳ್ಳಿ. ಈ ಸಮೀಕ್ಷೆಯನ್ನು ಸಿದ್ದರಾಮಯ್ಯ ಅವರು ವೋಟಿಗಾಗಿ ಮಾಡಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಕೆಲ ಪ್ರಶ್ನೆಗಳಿಗೆ ಸಿಡಿಮಿಡಿಗೊಂಡ ಸೋಮಣ್ಣ, ಉತ್ತರ ನೀಡಲು ಆಗದೇ ಇರುವ ಪ್ರಶ್ನೆಗಳನ್ನು ಸಮೀಕ್ಷೆಯಲ್ಲಿ ಕೇಳುತ್ತಿದ್ದೀರಿ. ಯಾವನೋ ತಲೆ ಕೆಟ್ಟಿರುವವನೇ ಇದನ್ನು ಮಾಡಿರಬೇಕು. ಆತನನ್ನು ಕರೆಯಿರಿ ಎಂದು ತೀಕ್ಷ್ಣವಾಗಿ ಹೇಳಿದರು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: RSS ಚುಟುವಟಿಕೆ ನಿಷೇಧ: ತಮಿಳುನಾಡು ನೀತಿ ಅಧ್ಯಯನಕ್ಕೆ ಸಿಎಂ ಸೂಚನೆ
ವೀಡಿಯೋ ಸುದ್ದಿಗಳನ್ನು ವೀಕ್ಷಿಸಲು ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ Subscribe ಮಾಡಿ:https://www.youtube.com/watch?v=JJgZvG3Eep4











