ನವದೆಹಲಿ – ತುಳು ಟೈಮ್ಸ್: ಪ್ಯಾರಿಸ್ ಒಲಿಂಪಿಕ್ ವೇಳೆ ವಿಶ್ವದ ಗಮನವನ್ನೇ ತನ್ನತ್ತ ಸೆಳೆದ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಯು ಟರ್ನ್ ಹೊಡೆದಿದ್ದಾರೆ. ಕುಸ್ತಿ ಅಖಾಡಕ್ಕೆ ವಿದಾಯ ಘೋಷಿಸಿದ್ದ ವಿನೇಶ್ ವೃತ್ತಿಪರ ಕುಸ್ತಿಯಿಂದ ನಿವೃತ್ತಿಯಿಂದ ಹೊರಬಂದಿರುವುದಾಗಿ ದೃಢಪಡಿಸಿದ್ದಾರೆ. ಆ ಮೂಲಕ ಒಲಿಂಪಿಕ್ ನಲ್ಲಿ ಪದಕ ಗೆಲ್ಲುವ ಕನಸಿನ ಭೇಟೆಗೆ ಇಳಿದಿದ್ದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಗ್ರಗಣ್ಯ ಸಾಧನೆಯ ಶಿಖರವೇರಿದ್ದ ವಿನೇಶ್ ಫೋಗಟ್ಗೆ 100 ಗ್ರಾಂ ಅಧಿಕ ತೂಕ ದುಃಸ್ವಪ್ನವಾಗಿ ಕಾಡಿತ್ತು. ಮಹಿಳೆಯರ 50 ಕೆಜಿ ವಿಭಾಗದಲ್ಲಿ ಫೈನಲ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯಳು ಎಂಬ ಗರಿಮೆಗೆ ಪಾತ್ರವಾಗಿದ್ದರು. ಆದ್ರೆ ಫೈನಲ್‌ಗೆ ಕೆಲವೇ ಗಂಟೆಗಳ ಮೊದಲು, ಅವರು ಅಧಿಕ ತೂಕ ಹೊಂದಿರುವುದು ಪತ್ತೆಯಾದ್ದರಿಂದ ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿತ್ತು. ಆ ಮೂಲಕ ವಿನೇಶ್ ಪದಕ ಭೇಟೆ ಕಮರಿ ಹೋಗಿತ್ತು. ಈ ವೇಳೆ ನೊಂದಿದ್ದ ವಿನೇಶ್ ಕುಸ್ತಿಗೆ ಗುಡ್‌ಬೈ ಹೇಳಿದ್ದರು.
ಇದನ್ನೂ ಓದಿ: ಜನೌಷಧಿ ಮುಚ್ಚುವ ನಿರ್ಧಾರ ರದ್ದುಗೊಳಿಸಿದ ಹೈಕೋರ್ಟ್
ಕುಸ್ತಿಯಿಂದ 18 ತಿಂಗಳ ವಿರಾಮದ ನಂತರ ನನ್ನ ವೃತ್ತಿ ಜೀವನದ ಮುಂದಿನ ಹೆಜ್ಜೆಗಳ ಬಗ್ಗೆ ಯೋಚಿಸುತ್ತಿದ್ದೆ ಎಂದು ವಿನೇಶ್ ಫೋಗಟ್ ಭಾವನಾತ್ಮಕ ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದಾರೆ. “ಪ್ಯಾರಿಸ್ ಒಲಿಂಪಿಕ್ ಅಂತ್ಯವೇ ಎಂದು ಜನರು ಕೇಳುತ್ತಲೇ ಇದ್ದರು. ಬಹಳ ಸಮಯದಿಂದ ನನ್ನ ಬಳಿ ಉತ್ತರವಿರಲಿಲ್ಲ. ಒತ್ತಡದಿಂದ, ನಿರೀಕ್ಷೆಗಳಿಂದ, ನನ್ನ ಸ್ವಂತ ಮಹತ್ವಾಕಾಂಕ್ಷೆಗಳಿಂದಲೂ ದೂರ ಸರಿಯಬೇಕಾಯಿತು. ವರ್ಷಗಳಲ್ಲಿ ಮೊದಲ ಬಾರಿಗೆ, ನಾನು ಉಸಿರಾಡಲು ಅವಕಾಶ ಮಾಡಿಕೊಟ್ಟೆ. ನನ್ನ ಪ್ರಯಾಣದ ಭಾರವನ್ನು ಅರ್ಥಮಾಡಿಕೊಳ್ಳಲು ನಾನು ಸಮಯ ತೆಗೆದುಕೊಂಡೆ – ಉತ್ತುಂಗಗಳು, ಆಘಾತಗಳು, ತ್ಯಾಗಗಳು, ಜಗತ್ತು ಎಂದಿಗೂ ನೋಡಿರದ ನನ್ನ ಆವೃತ್ತಿಗಳು… ಮತ್ತು ಆ ಪ್ರತಿಬಿಂಬದಲ್ಲಿ ಎಲ್ಲೋ, ನಾನು ಸತ್ಯವನ್ನು ಕಂಡುಕೊಂಡೆ, ನಾನು ಇನ್ನೂ ಈ ಕ್ರೀಡೆಯನ್ನು ಪ್ರೀತಿಸುತ್ತೇನೆ. ನಾನು ಇನ್ನೂ ಸ್ಪರ್ಧಿಸಲು ಬಯಸುತ್ತೇನೆ”ಎಂದು ಬರೆದುಕೊಂಡಿದ್ದಾರೆ.
ಒಲಿಂಪಿಕ್ ಕುಸ್ತಿ ಫೈನಲ್‌ನಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ವಿನೇಶ್ ಅವರದ್ದಾಗಿದೆ. ತವರು ರಾಜ್ಯ ಹರಿಯಾಣದಲ್ಲಿ ರಾಜಕೀಯ ರಂಗ ಪ್ರವೇಶಿಸಿದ್ದ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜೂಲಾನಾ ಕ್ಷೇತ್ರದಿಂದ ಜಯ ಸಾಧಿಸಿ ಶಾಸಕಿಯಾಗಿದ್ದರು. ಹೆರಿಗೆಯ ನಂತರ ಕುಸ್ತಿ ಸ್ಪರ್ಧೆಗೆ ಮರಳಿರುವ ಕ್ರೀಡಾಪಟುಗಳ ಪಟ್ಟಿಗೆ ವಿನೇಶ್ ಈಗ ಸೇರಲಿದ್ದಾರೆ. ಕುಸ್ತಿಪಟು ಸೋಮವೀರ್ ರಾಠಿ ಅವರನ್ನು ವಿವಾಹವಾದ ವಿನೇಶ್ ಜುಲೈ 2025 ರಲ್ಲಿ ಗಂಡು ಮಗುವಿಗೆ ಜನ್ಮನೀಡಿದ್ದರು. ಆ ಮೂಲಕ ಮಗುವಿನ ಜವಾಬ್ದಾರಿಯ ನಡುವೆಯೂ ಕುಸ್ತಿ ಅಖಾಡದಲ್ಲಿ ಪಳಗಲಿದ್ದಾರೆ. 2028 ರಲ್ಲಿ ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಲ್ಲಿ ಮತ್ತೆ ಅಖಾಡಕ್ಕಿಳಿಯುವುದು ವಿನೇಶ್ ಅವರ ಕನಸು ಆಗಿದೆ.
In a major development for Indian sports, wrestler Vinesh Phogat has announced a U-turn on her retirement, confirming her decision to return to the mat and target the 2028 Los Angeles Olympics. Tulu Times
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/@tulutimess











