ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಬೆಳೆಗಾರರಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಬಿಡುಗಡೆಯಾಗಿದೆ. ಆದ್ರೆ, ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಮುಖ್ಯ ಕಾರಣಗಳೆಂದರೆ, ಅಧಿಕ ಮಳೆ, ಗ್ರಾಮಗಳಲ್ಲಿ ಇರುವ ಮಳೆಮಾಪಕ ಹಾಗೂ ಹವಾಮಾನ ದಾಖಲು ಯಂತ್ರಗಳ ದುಸ್ಥಿತಿ ಕಾರಣವಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಆಗ್ರಹ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಕೃಷಿಕರಿಗೆ ಅನುಕೂಲವಾಗಲೆಂದು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆ ಎಂದರೆ ಬೆಳೆ ವಿಮೆ. ಈ ಯೋಜನೆಯ ಪ್ರಕಾರ ರೈತರು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಬೆಳೆ ವಿಮೆಯನ್ನು ಪಾವತಿ ಮಾಡಬೇಕು. ಬೆಳೆ ವಿಮೆಯ ಅವಧಿ ಮುಗಿದ ಬಳಿಕ ಆ ವರ್ಷದ ಹವಾಮಾನವನ್ನು ಗಮನಿಸಿಕೊಂಡು ನಿಯಮದ ಪ್ರಕಾರ ವಿಮಾ ಹಣವನ್ನು ರೈತರ ಖಾತೆಗೆ ವಿಮಾ ಕಂಪನಿಯು ಬಿಡುಗಡೆ ಮಾಡುತ್ತದೆ. ಕಳೆದ ಕೆಲವು ವರ್ಷದಿಂದ ಈ ಯೋಜನೆ ಸರಿಯಾಗಿಯೇ ಜಾರಿಯಾಗಿದೆ. ಆದರೆ ಇದು ಕೆಲವು ಪ್ರದೇಶಗಳಲ್ಲಿ ಅಡಿಕೆ ಬೆಳೆಗಾರರಿಗೆ ಪ್ರಯೋಜನಕ್ಕೆ ಬಂದಿಲ್ಲ ಎಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.
ಹವಾಮಾನ ಬದಲಾಣೆಗೆ ರೈತರು ಕಂಗಾಲು
ಹವಾಮಾನ ಆಧಾರಿತ ಬೆಳೆ ವಿಮೆ ಇದಾದ್ದರಿಂದ ಹವಾಮಾನ ದಾಖಲು ಕೂಡಾ ಅಗತ್ಯ. ಇದಕ್ಕಾಗಿ ಪ್ರತೀ ಗ್ರಾಮಗಳಿಂದ ಮಳೆ ಹಾಗೂ ತಾಪಮಾನದ ದಾಖಲೆಗಳನ್ನು ಇಲಾಖೆಗಳ ಮೂಲಕ ಪಡೆಯಲಾಗುತ್ತದೆ. ಆದರೆ ಈ ಬಾರಿ ಪುತ್ತೂರಿನಲ್ಲಿ ಉತ್ತಮ ಮಳೆಯಾಗಿದೆ. ಕಳೆದ ವರ್ಷದಿಂದ ಈ ವಿಮಾ ಅವಧಿಯ ಒಳಗೆ ಕೂಡಾ ಮಳೆಯಾಗಿದೆ. ಅಕಾಲಿಕ ಮಳೆಯಿಂದ ಅಡಿಕೆ ಬೆಳೆ ನಷ್ಟವಾಗಿದೆ. ಕೊಳೆರೋಗ ಬಾಧಿಸಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾಪಮಾನದ ಬದಲಾವಣೆಯೂ ಅಡಿಕೆ ಉದುರಲು ಕಾರಣವಾಗಿತ್ತು. ಹೀಗಾಗಿ ಅಡಿಕೆ ಬೆಳೆಗಾರರು ಸಂಕಷ್ಟ ಅನುಭವಿಸಿದ್ದರು. ಹೀಗಿರುವಾಗ ಬೆಳೆ ವಿಮೆಯನ್ನು ಗಮನಿಸಿದರೆ ರೈತರು ಕಟ್ಟಿದ ಪ್ರೀಮಿಯಂನಷ್ಟೇ ಕೆಲವು ರೈತರಿಗೆ ಬಂದಿದ್ದು ಅಚ್ಚರಿಯಾಗಿದೆ. ಹೀಗೆ ಮೊದಲೇ ತೊಂದರೆಗೊಳಗಾದ ಅಡಿಕೆ ಬೆಳೆಗಾರರಿಗೆ ಈ ಯೋಜನೆ ಕೂಡಾ ನೆರವಿಗೆ ಬಂದಿಲ್ಲ.
ಮಳೆಮಾಪಕ & ದಾಖಲು ಯಂತ್ರಗಳ ದುಸ್ಥಿತಿ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಅಡಿಕೆ ಬೆಳೆಗಾರರಿಗೆ ಈ ಬಾರಿ ಸರಿಯಾಗಿ ತಲುಪಿಲ್ಲ. ಇದಕ್ಕೆ ಕಾರಣ ಗ್ರಾಮಗಳಲ್ಲಿ ಇರುವ ಮಳೆ ಮಾಪಕ ಹಾಗೂ ಹವಾಮಾನ ದಾಖಲು ಮಾಡುವ ಯಂತ್ರಗಳು. ಈ ಯಂತ್ರಗಳು ಅನೇಕ ಕಡೆಗಳಲ್ಲಿ ಕೆಟ್ಟು ಹೋಗಿವೆ. ಇದರಿಂದ ಮಳೆ ದಾಖಲೆ ನಿಖರವಾಗಿ ಉಲ್ಲೇಖವಾಗಿಲ್ಲ. ಮಳೆಮಾಪಕ, ಹವಾಮಾನ ದಾಖಲಿಸುವ ಯಂತ್ರಗಳು ಸುಸ್ಥಿತಿಯಲ್ಲಿ ಇಲ್ಲ ಎಂದು ಪಂಚಾಯತ್ ಮಟ್ಟದಲ್ಲಿ ಕೆಲವು ಸಿಬ್ಬಂದಿಗಳೇ ಹೇಳಿದ್ದಾರೆ.
ಸೂಕ್ತ ರೀತಿಯಲ್ಲಿ ವಿಮಾ ಹಣ ವಿತರಣೆಗೆ ಆಗ್ರಹ
ಈ ಕೂಡಲೇ ಈ ಯಂತ್ರಗಳ ಸ್ಥಿತಿಯ ಬಗ್ಗೆ ಸರಿಯಾದ ತಪಾಸಣೆಯಾಗಿ, ದುರಸ್ತಿ ಮಾಡುವ ಕೆಲಸ ಆಗಬೇಕು. ಈ ಬಾರಿಯ ಆಗಿರುವ ಎಡವಟ್ಟುಗಳಿಗೆ ಖಾಸಗಿಯವರಿಂದ ಅಥವಾ ಕೃಷಿಕರಿಂದ ಮಳೆ ಹಾಗೂ ತಾಪಮಾನದ ದಾಖಲೆಗಳನ್ನು ಪಡೆದು ಸೂಕ್ತ ರೀತಿಯಲ್ಲಿ ವಿಮಾ ಹಣ ವಿತರಣೆಯಾಗಬೇಕು. ಪುತ್ತೂರು ತಾಲೂಕಿನ ಹಾಗೂ ಜಿಲ್ಲೆಯ ಎಲ್ಲಾ ಅಡಿಕೆ ಬೆಳೆಗಾರರಿಗೆ ಈಗಾಗಲೇ ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ಸಿಗಬೇಕು ಎಂದು ಅರುಣ್ ಕುಮಾರ್ ಪುತ್ತಿಲ ಆಗ್ರಹ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಲೋಕಸಭೆಯಲ್ಲಿ ವಂದೇ ಮಾತರಂ ಚರ್ಚೆಗೆ 10 ಗಂಟೆ ಮೀಸಲು
===================
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/@tulutimess











