ಪುತ್ತೂರು – ತುಳು ಟೈಮ್ಸ್: ಅಲ್ಲಿ ನೆರೆದಿದ್ದ ಸಹಸ್ರ ಸಂಖ್ಯೆಯ ಭಕ್ತರ ಬಾಯಲ್ಲಿ ಗೋವಿಂದಾ.. ಗೋವಿಂದಾ ಎನ್ನುವ ಜಯಘೋಷ. ವೆಂಕಟೇಶನ ಮಹಿಮೆ ಆಲಿಸುತ್ತಾ ನೆರೆದಿದ್ದವರೆಲ್ಲಾ ಭಕ್ತಿ ಎನ್ನುವ ಸಾಗರದಲೆಯಲ್ಲಿ ತೇಲುತ್ತಿದ್ದರು. 16 ಜೋಡಿಗಳು ಸಪ್ತಪದಿ ತುಳಿದಿದ್ದರು. ಕುಣಿತ ಭಜನೆ, ಮಾಂಗಲ್ಯ ಧಾರಣೆ , ಸಂಸ್ಕೃತಿಯ ಅನಾವರಣ, ಶ್ರೀನಿವಾಸನ ಆಕರ್ಷಕ ಅಲಂಕಾರ, ಪೂಜೆ ಪುನಸ್ಕಾರ, ಊಟೋಪಚಾರ, ಹೀಗೆ ಹತ್ತು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು ಶ್ರೀನಿವಾಸ ಕಲ್ಯಾಣೋತ್ಸವ, ಸಾಮೂಹಿಕ ವಿವಾಹ ಹಾಗೂ ಹಿಂದವೀ ಸಾಮ್ರಾಜ್ಯೋತ್ಸವ.
ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ವತಿಯಿಂದ ಶ್ರೀನಿವಾಸ ಕಲ್ಯಾಣೋತ್ಸವ, 16 ನವ ಜೋಡಿಗಳಿಗೆ ಸಾಮೂಹಿಕ ವಿವಾಹ ಅದ್ಧೂರಿಯಾಗಿ ನಡೆಯಿತು.
16 ನವ ಜೋಡಿಗಳು ಶ್ರೀದೇವಿ ಭೂದೇವಿ ಸಹಿತನಾದ ಶ್ರೀನಿವಾಸ ದೇವರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪುತ್ತಿಲ ಪರಿವಾರದ ಪದಾಧಿಕಾರಿಗಳ ಸಹಿತ, ಗಣ್ಯರು, ಪ್ರಮುಖರು ಹಾಗೂ ಹಲವಾರು ಮಂದಿ ಸಂಭ್ರಮಕ್ಕೆ ಸಾಕ್ಷಿಯಾದರು.


ಶ್ರೀನಿವಾಸ ಕಲ್ಯಾಣೋತ್ಸವದ ಹೈಲೈಟ್ಸ್.!
- ಹರಿದು ಬಂದ ಜನಸಾಗರ – ತುಂಬಿ ತುಳುಕಿದ 60 ಸಾವಿರ ಚದರ ಅಡಿಯ ಪೆಂಡಾಲ್
- ಆಕರ್ಷಕ ಕುಣಿತ ಭಜನೋತ್ಸವ – ಕಣ್ತುಂಬಿಕೊಂಡ ಭಕ್ತರು
- ಶ್ರೀನಿವಾಸ ಕಲ್ಯಾಣೋತ್ಸವ ವೇಳೆ ಮೊಳಗಿದ ಸಂಕೀರ್ತನೆ
- ಮಾಂಗಲ್ಯ ಧಾರಣೆ ವೇಳೆ ವಿಶೇಷ ಸುಡುಮದ್ದು ಪ್ರದರ್ಶನ
- ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಭಕ್ತಿ ಪರವಶರಾದ ಸಹಸ್ರಾರು ಮಂದಿ
- ಭಕ್ತರಿಗೆ ತಿರುಪತಿ ತಿಮ್ಮಪ್ಪನ ಕಿರೀಟ ಆಶೀರ್ವಾದ
- ಎಲ್ಇಡಿ ಪರದೆ ಅಳವಡಿಕೆ – ಸುಲಭವಾಗಿ ವೀಕ್ಷಣೆ
- ಸಹಸ್ರ ಸಂಖ್ಯೆ ಭಕ್ತರಿಂದ ಅನ್ನಸಂತರ್ಪಣೆ ಸ್ವೀಕಾರ – ಪ್ರಸಾದ ಸ್ವೀಕಾರ
- ಸ್ವಯಂ ಸೇವಕರಿಂದ ಭಕ್ತರಿಗೆ ಮಾಹಿತಿ, ತುರ್ತು ಸೇವೆಗೆ ಆ್ಯಂಬುಲೆನ್ಸ್ ಸನ್ನದ್ಧ
ಬೆಳಿಗ್ಗೆ 6.30ಕ್ಕೆ ಸುಪ್ರಭಾತ ಪೂಜೆಯಿಂದ ಕಾರ್ಯಕ್ರಮ ಪ್ರಾರಂಭವಾಗಿ, ಮಧ್ಯಾಹ್ನ ಪದ್ಮಾವತಿ ಮಹಾಲಕ್ಷ್ಮೀ ಸಹಿತ ಶ್ರೀನಿವಾಸ ದೇವರಿಗೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ಜರಗಿತು. ಸಂಜೆ ಶ್ರೀನಿವಾಸ ದೇವರ ಕಲ್ಯಾಣೋತ್ಸವದ ಕುರಿತು ತಿರುಪತಿಯ ಅರ್ಚಕರು ಪ್ರವಚನ ನೀಡಿದರು. ಅದಾದ ಬಳಿಕ ಸಂಕಲ್ಪ ಪುಣ್ಯಾಹ, ದೇವನಾಂದಿ, ವರಪೂಜೆ, ವರೋಪಚಾರ ಸಹಿತ ಕಂಕಣಧಾರಣೆ ನಡೆಯಿತು.

ಮಾಂಗಲ್ಯ ಧಾರಣೆಯ ಶುಭಘಳಿಗೆಯಲ್ಲಿ ಸಹಸ್ರಾರು ಭಕ್ತರಿಂದ ಗೋವಿಂದಾ ಗೋವಿಂದಾ ಉದ್ಯೋಷ ಮೊಳಗಿತು. ಮಹಾಮಂಗಳಾರತಿ ಎತ್ತಿ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ಮಾಡುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು. ಕಾರ್ಯಕ್ರಮದಲ್ಲಿ ಸಹಸ್ರ ಸಹಸ್ರ ಸಂಖ್ಯೆಯ ಭಕ್ತರಿಗೆ ಮಧ್ಯಾಹ್ನ ಮತ್ತು ರಾತ್ರಿ ಅನ್ನಪ್ರಸಾದ ವಿತರಣೆ ನಡೆಯಿತು. ಕಲ್ಯಾಣೋತ್ಸವಕ್ಕೆ ಸಿದ್ಧಪಡಿಸಿದ ಸುಮಾರು 60 ಸಾವಿರ ಚದರ ಅಡಿಯ ಪೆಂಡಾಲ್ ನಲ್ಲಿ ಭಕ್ತರು ತುಂಬಿ ತುಳುಕಿದ್ದು, ಪೆಂಡಾಲ್ ಹೊರಗಡೆಯೂ ಭಕ್ತರು ಕಿಕ್ಕಿರಿದು ನೆರೆದಿದ್ದರು.
Putthila Parivara Seva Trust organised Srinivasa Kalyanosthava and Marriage Program at Mahalingeshwara Temple Puttur – Tulu Times
ಸಾಮೂಹಿಕ ವಿವಾಹದ ವಿಶೇಷತೆ
- ಮುಕ್ರಂಪಾಡಿ ಪುತ್ತಿಲ ಟ್ರಸ್ಟ್ ಕಚೇರಿ ಬಳಿಯಿಂದ ಹೊರಟ ದಿಬ್ಬಣ
- ವಧು – ವರರಿಗೆ ಪ್ರತ್ಯೇಕ ದಿಬ್ಬಣದ ವಾಹನ ವ್ಯವಸ್ಥೆ
- ವಿವಾಹ ಸಮಾರಂಭದ ಚಪ್ಪರದಲ್ಲಿ ಪನ್ನೀರ ಸಿಂಪಡನೆ
- ವಧುವರರನ್ನು ಸೋಬಾನೆ ಹಾಡು ಮೂಲಕ ಬರ ಮಾಡಿಕೊಂಡ ಸುಮಂಗಲಿಯರು
- ಚಪ್ಪರದಲ್ಲಿ ವಾದ್ಯಘೋಷದೊಂದಿಗೆ ಸಾಗಿದ ಮದುಮಕ್ಕಳ ದಿಬ್ಬಣ
- ಪ್ರಧಾನ ವೇದಿಕೆಯ ಎಡ-ಬಲ ಬದಿಯಲ್ಲಿ 16 ವಿವಾಹ ಮಂಟಪಗಳು
- ಪ್ರತಿ ಜೋಡಿ ವಿವಾಹಕ್ಕೂ ಪ್ರತ್ಯೇಕ ಪುರೋಹಿತರು
- ಪುರೋಹಿತರ ಮಾರ್ಗದರ್ಶನದಂತೆ ಏಕಕಾಲದಲ್ಲಿ ಮಾಲೆ, ಮಾಂಗಲ್ಯ ಧಾರಣೆ
- ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ಬಳಿಕ ಉಡುಗೊರೆ, ಶುಭಹಾರೈಕೆ
ತಿರುಪತಿ ಶ್ರೀಕ್ಷೇತ್ರ ಮೂಲದ ಲಕ್ಷ್ಮೀಪತಿ ಶರ್ಮ ಅವರ ನೇತೃತ್ವದಲ್ಲಿ ವೇ.ಮೂ ಮೋಹನ್ ಮತ್ತು ವೇ.ಮೂ ರಾಮಚಂದ್ರ ಭಟ್ಟಾಚಾರ್ಯ ಅವರು ವೈದಿಕ ಕಾರ್ಯಕ್ರಮ ನೆರವೇರಿಸಿದರು. ಸುಮಾರು 12 ಮಂದಿ ಆಗಮಿಕರು ಕಲ್ಯಾಣೋತ್ಸವವನ್ನು ನಡೆಸಿಕೊಟ್ಟರು. ವೈದಿಕ ಸಮಿತಿಯ ಸಂಚಾಲಕ ಗುರು ತಂತ್ರಿ, ಶ್ರೀಕೃಷ್ಣ ಉಪಾಧ್ಯಾಯ, ಸಹಸಂಚಾಲಕರಾದ ಅಶೋಕ್ ಪುತ್ತಿಲ, ಪ್ರದೀಪ್, ಕಲ್ಯಾಣೋತ್ಸವದ ವಿವಿಧ ಜವಾಬ್ದಾರಿ ನಿರ್ವಹಿಸಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸ್ಯಾಕ್ಟೋಫೋನ್ ವಾದಕ ಪಿ.ಕೆ.ಗಣೇಶ್ ಮತ್ತು ಅವರ ಪುತ್ರ ಶಿವರಾಜ್ ಕಲ್ಯಾಣೋತ್ಸವದಲ್ಲಿ ಮಂಗಳ ವಾದ್ಯ ನುಡಿಸಿದರು.
ಶ್ರೀನಿವಾಸ ಕಲ್ಯಾಣೋತ್ಸವದ ತ್ರಿನೇತ್ರ, ವೇದಿಕೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿ ಬ್ರಹ್ಮಶ್ರೀ ವೇ. ಮೂ. ಕುಂಟಾರು ರವೀಶ ತಂತ್ರಿ, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ದಂಪತಿ, ಅಧ್ಯಕ್ಷ ನರಸಿಂಹ ಪ್ರಸಾದ್ ದಂಪತಿ, ಸಮಿತಿ ಗೌರವಾಧ್ಯಕ್ಷ ಸಿದ್ದನಾಥ್ ಯಸ್ ಕೆ ದಂಪತಿ ಸೇರಿದಂತೆ ಮೊದಲಾದವರು ಸೇರಿದ್ದರು. ಸಹಸ್ರ ಸಂಖ್ಯೆಯಲ್ಲಿ ಹರಿದು ಬಂದ ಜನಸಾಗರ ಶ್ರೀನಿವಾಸ ಕಲ್ಯಾಣೋತ್ಸವವನ್ನು ಕಣ್ತುಂಬಿಕೊಂಡರು.

ಇದನ್ನೂ ಓದಿ: ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಆಡಳಿತ ಮಂಡಳಿ ಸಭೆ
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











