ಬ್ರೇಕಿಂಗ್ ನ್ಯೂಸ್
ಕರ್ನಾಟಕಧಾರ್ಮಿಕ

Temple: ಕೊಟ್ಟಿಯೂರು ಶಿವ ಪವಾಡದ ಬಗ್ಗೆ ನಿಮಗೆಷ್ಟು ಗೊತ್ತು..?

Temple: ಪಶ್ಚಿಮ ಘಟ್ಟಗಳ ತಪ್ಪಲಿನ ಪ್ರಕೃತಿಯ ಮಡಿಲ ಧಾರ್ಮಿಕ ಕ್ಷೇತ್ರ ಅದು.. ದೇವರ ನಾಡು ಕೇರಳದ ಕೊಟ್ಟಿಯೂರು.. ಸದ್ಯ ಇಡೀ ದೇಶದ ಗಮನ ಸೆಳೆಯುತ್ತಿರುವ ಶಿವನ ಕ್ಷೇತ್ರ.. ಇಡೀ ಕರುನಾಡಿನ ಜನತೆ ಕೇರಳದ ಶಿವನ ದರ್ಶನ ಪಡೆದು ಪುನೀತರಾಗುವತ್ತ ಚಿತ್ತ ನೆಟ್ಟಿರೋದು ನಿಗೆ ಗೊತ್ತೇ ಇದೆ. ಹೌದು, ನಿಮಗೆಲ್ಲಾ ತಿಳಿದಿರೋ ಹಾಗೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಕೇರಳದ ಕೊಟ್ಟಿಯೂರು ದೇವಾಲಯಕ್ಕೆ ಭೇಟಿ ಕೊಟ್ಟದ್ದೇ ಕೊಟ್ಟದ್ದು, ಕರ್ನಾಟಕದಲ್ಲೂ ಕೊಟ್ಟಿಯೂರು ಶಿವ ದೇವಾಲಯ ಬಹಳ ಫೇಮಸ್‌ ಆಗ್ಬಿಟ್ಟಿದೆ.

ಕೇರಳದ ಈ ದೇವಾಲಯಕ್ಕೆ ಜನ ಹೋಗೋದ್ಯಾಕೆ?

ಸುತ್ತಲೂ ಅಚ್ಚ ಹಸಿರಿನ ನೆಮ್ಮದಿಯ ವಾತಾವರಣ.. ಹಸಿರು ಮರಗಳ ನಡುವೆ ಬೀಸುವ ತಂಗಾಳಿಯ ಮಧ್ಯೆ ನೆಲೆಸಿರುವ ಶಿವನ ದರ್ಶನ ಪಡೆಯಲು ಜನಸಾಗರವೇ ಹರಿದುಬರುತ್ತಾ ಇರುವುದು.. ನೋಡೋಕೆ ಅಬ್ಬಬ್ಬಾ ಎಷ್ಟೊಂದು ಚಂದ.. ಶಿವನಭಕ್ತರು ಕರುನಾಡಿನ ವಿವಿಧ ಭಾಗಗಳಿಂದ ಸಾಗರೋಪದಿಯಲ್ಲಿ ಇಲ್ಲಿಗೆ ಬಂದು ಶಿವನ ದರ್ಶನ ಪಡೆದುಕೊಳ್ತಿದ್ದಾರೆ. ಗಂಧರ್ವ ಲೋಕದಂತೆ ಕಾಣಿಸೋ ಈ ಕೊಟ್ಟಿಯೂರು ಸನ್ನಿಧಿಗೆ ಅಪಾರ ಸಂಖ್ಯೆಯ ಭಕ್ತಾಧಿಗಳು ಭೇಟಿ ನೀಡಿ ಶಿವನ ದರ್ಶನ ಪಡೆದು ಪುನೀತರಾಗ್ತಾರೆ. ಕಾಂತಾರ ಸಿನೆಮಾದಲ್ಲಿ ಕಾಣಿಸೋ ಅದ್ಭುತ ದೃಶ್ಯಗಳಂತೆ ಕಾಣುವ ರಿಯಲ್‌ ವೀಡಿಯೋ ಕೇರಳದ ಕೊಟ್ಟಿಯೂರು ಎಂಬ ದೇವಸ್ಥಾನದಲ್ಲಿ ಲೈವ್‌ ಆಗಿಯೇ ನೋಡಬಹುದು. ನಿಸರ್ಗ ಸೌಂದರ್ಯ ಹಾಗೂ ಭಕ್ತಿ ಸೌಂದರ್ಯಗಳು ಸೇರಿರುವ ಈ ಪ್ರದೇಶ ಇರೋದು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಕೊಟ್ಟಿಯೂರು ಎಂಬಲ್ಲಿ. ಈ ಪುಣ್ಯ ಸ್ಥಳದ ಬಗ್ಗೆ ಈ ಹಿಂದೆ ಯಾರಿಗೂ ಅಷ್ಟೊಂದು ಮಾಹಿತಿಯೇ ಇರಲಿಲ್ಲ.

ಕೊಟ್ಟಿಯೂರು ಶಿವನಲ್ಲಿ ದರ್ಶನ್‌ ಬೇಡಿಕೊಂಡದ್ದೇನು?

ಬಹುತೇಕ ಜನರಿಗೆ ಕೇರಳದ ಕೊಟ್ಟಿಯೂರು ಶಿವನ ಮಹಿಮೆಯ ಬಗ್ಗೆ ಗೊತ್ತಿರಲಿಲ್ಲ. ಆದ್ರೆ ಇದೀಗ ಯಾವುದೇ ಸೋಷಿಯಲ್‌ ಮೀಡಿಯಾ ನೋಡಿದ್ರೂ ಕೇರಳದ ಕೊಟ್ಟಿಯೂರಿನ ವೀಡಿಯೋ ಫೋಟೋಗಳು ವೈರಲ್‌ ಆಗ್ತಾ ಇವೆ. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಭೇಟಿ ಕೊಟ್ಟದ್ದೇ ಕೊಟ್ಟದ್ದು, ಕರ್ನಾಟಕದಲ್ಲೂ ಕೊಟ್ಟಿಯೂರು ಶಿವ ದೇವಾಲಯ ಫೇಮಸ್‌ ಆಗಿಬಿಟ್ಟಿದೆ. ದರ್ಶನ್‌ ತನ್ನ ಪತ್ನಿ ಕುಟುಂಬಸ್ಥರ ಜೊತೆಗೆ ಈ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡಿದ್ದರು. ದರ್ಶನ್‌ ಶಿವನ ಭಕ್ತರಾಗಿದ್ದು, ವಿಶೇಷವಾದ ಪೂಜೆ ಮಾಡುವ ಮೂಲಕ ಶ್ರದ್ಧಾ ಭಕ್ತಿಯಿಂದ ಕೆಲವು ದಿನ ಕೇರಳದಲ್ಲಿ ತಂಗಿದ್ರು, ಇನ್ನು ತನ್ನ ಸಿನಿಮಾ ಕೆರಿಯರ್‌ ಬಗ್ಗೆ ದೇವರಲ್ಲಿ ಬೇಡಿಕೊಂಡು ಅನಂತರ ಸಿನಿಮಾ ಕೆಲಸಗಳಲ್ಲಿ ಇದೀಗ ಮತ್ತೆ ಬಿಝಿಯಾಗಿದ್ದಾರೆ. ದರ್ಶನ್‌ ಹೋಗಿ ಬಂದ ಬಳಿಕ ಇದೀಗ ಕರ್ನಾಟಕದ ಜನರಂತೂ ಕೇರಳದ ಕಡೆಗೆ ಮುಖಮಾಡಿದ್ದಾರೆ..! ನೀರಿನ ನಡುವೆ ಇರುವ ಇಲ್ಲಿನ ಅಪರೂಪದ ದೇವಸ್ಥಾನದಲ್ಲಿ ಇದೀಗ ನೀರಿಗಿಂತಲೂ ಹೆಚ್ಚು ಜನರ ಪ್ರವಾಹ ಉಂಟಾಗಿದೆ ಅಂತ ಹೇಳಬಹುದು.

28 ದಿನಗಳ ಕಾಲವಷ್ಟೇ ದೇವಸ್ಥಾನ ಓಪನ್‌ ಯಾಕೆ?

ಕರ್ನಾಟಕದಲ್ಲಿ ವಿವಿಧ ಭಕ್ತ ಪ್ರಧಾನ ದೇವಸ್ಥಾನಗಳಿವೆ.. ಒಂದೊಂದು ದೇವಸ್ಥಾನವೂ ತನ್ನದೇ ಆದ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ತನ್ನದೇ ಆದ ಪವಾಡಗಳನ್ನೂ ಕೂಡ ಹೊಂದಿದೆ. ಅಂತಹ ಸಾಲಿನಲ್ಲಿ ಇದೀಗ ಕೇರಳದ ಕೊಟ್ಟಿಯೂರು ನಂಬರ್‌ ಕ್ಷೇತ್ರ ಕೂಡ ಸೇರಿಕೊಂಡಿದೆ. ಪ್ರಕೃತಿಯ ನಡುವೆ ಇರುವ ದೇವರನ್ನು, ವರ್ಷದಲ್ಲಿ ಒಂದೇ ಒಂದು ಬಾರಿ ಮಾತ್ರ ದರ್ಶನ ಕೊಡುವ ದೇವರನ್ನು ನೋಡೋಕೆ ಇಲ್ಲಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಜನ ಬರ್ತಾ ಇದ್ದಾರೆ. ಇನ್ನು ಕೇರಳದ ಈ ಪ್ರಸಿದ್ಧ ಹಾಗೂ ಪುರಾತನ ಕ್ಷೇತ್ರದ ಬಗ್ಗೆ ಜನತೆಗೆ ಇರೋ ಮಾಹಿತಿ ಅತ್ಯಲ್ಪ. ಇದನ್ನು ದಕ್ಷಿಣದ ಕಾಶಿ ಎಂದೂ ಸಹ ಕರೆಯುತ್ತಾರೆ. ಈ ದೇವಾಲಯ ಇರುವ ಸ್ಥಳ ಮಹಾಶಿವ ತಪಸ್ಸು ಮಾಡಿದ ಸ್ಥಳ ಎಂದು ನಂಬಲಾಗಿದೆ. ಇಲ್ಲಿ ಒಂದು ತಿಂಗಳ ಕಾಲ ಮೇ ಅಥವಾ ಜೂನ್‌ನಲ್ಲಿ ವಾರ್ಷಿಕ ಉತ್ಸವ ನಡೆಯುತ್ತದೆ. ಜೋರಾಗಿ ಸುರಿಯುವ ಮಳೆಯ ನಡುವೆಯೇ ಈ ಉತ್ಸವ ನಡೆಯುತ್ತದೆ. ಇದನ್ನು ವೈಶಾಖೋತ್ಸವ ಎಂದು ಕರೆಯಲಾಗುತ್ತದೆ. ಪ್ರತಿ ವರ್ಷ ವೈಶಾಖ ಮಾಸದಲ್ಲಿ ಈ ದೇವಸ್ಥಾನ 28 ದಿನಗಳ ಕಾಲ ಭಕ್ತರಿಗೆ ಮುಕ್ತವಾಗಿರುತ್ತದೆ.

ದಂಪತಿಗಳ ಕಷ್ಟಗಳನ್ನು ನೀಗಿಸ್ತಾನೆ ಶಿವ!

ಹೌದು, ಈ ದೇವಾಲಯಕ್ಕೆ ವರ್ಷದ ಉಳಿದ ದಿನಗಳಲ್ಲಿ ಯಾರಿಗೂ ಪ್ರವೇಶ ಇರೋದಿಲ್ಲ..ಇಲ್ಲಿ ದೇವಾಲಯ ಅಂದರೆ ದೊಡ್ಡ ದೊಡ್ಡ ಕಟ್ಟಡಗಳು ಇರೋಲ್ಲ. ಚಾವಣಿಗೆ ಒಣಹುಲ್ಲು ಹೊದಿಸಿದ ಗುಡಿಸಲುಗಳು ಮಾತ್ರ ಇವೆ. ಈ ಗುಡಿಸಲಿನ ಒಳಗೇ ಶಿವಲಿಂಗವಿದೆ. ಇಲ್ಲಿ ಜಾತ್ರೆಯ ಸಮಯದಲ್ಲಿ ಈ ಕಾಡನ್ನು ಕಡಿದು ತೆಂಗಿನ ಗರಿಗಳ ತಾತ್ಕಾಲಿಕ ದೇವಸ್ಥಾನ ನಿರ್ಮಿಸುತ್ತಾರೆ. ಈ ದೇವಸ್ಥಾನದ ಒಳಗಡೆ ದೀಪ ಹಚ್ಚುತ್ತಾರೆ. ಅಲ್ಲೊಂದು ಉದ್ಭವ ಶಿವಲಿಂಗ ಇದ್ದು, ಅದರ ದರ್ಶನವನ್ನು ಜನ ಪಡೆಯುತ್ತಾರೆ. ವೈಶಾಖ ಮಹೋತ್ಸವದ ದಿನ ಶಿವಲಿಂಗಕ್ಕೆ ತುಪ್ಪದಿಂದ ಅಭಿಷೇಕ ಮಾಡಲಾಗುತ್ತೆ. ತಂತ್ರ ದೇವರಿಗೆ ತೆಂಗಿನ ನೀರಿನಿಂದ ಅಭಿಷೇಕ ಮಾಡುವುದರೊಂದಿಗೆ ಸಂಪನ್ನಗೊಳ್ಳುತ್ತೆ. ಇಲ್ಲಿ ಶಿವನ ಜೊತೆಗೆ ಆತನ ಪತ್ನಿಯಾದ ಸತಿದೇವಿ ಅಥವಾ ದಾಕ್ಷಾಯಣಿ ದೇವಿ ಮತ್ತು ಬ್ರಹ್ಮ ಹಾಗೂ ವಿಷ್ಣುವನ್ನೂ ಇಲ್ಲಿ ಆರಾಧಿಸಲಾಗುತ್ತದೆ. ಪುರಾಣ ಕತೆಗಳಲ್ಲಿ ಬರುವಂತೆ ದಕ್ಷಯಾಗ ನಡೆದಿದ್ದು ಇಲ್ಲೇ. ಇದೇ ಸ್ಥಳದಲ್ಲಿ ಸತೀದೇವಿ ತನ್ನನ್ನು ತಾನು ಯಜ್ಞಕುಂಡಕ್ಕೆ ಅರ್ಪಣೆ ಮಾಡಿಕೊಂಡಳು. ಆ ಯಜ್ಞ ನಡೆದ ಸ್ಥಳವೇ ಇದು. ಈ ಯಾಗದ ಬಳಿಕ ಶಿವ ತನ್ನ ಪತ್ನಿಗೆ ಆದ ಸಂಕಷ್ಟ ಮತ್ತು ಅದರಿಂದ ತನಗಾದ ನೋವು ಜಗತ್ತಿನಲ್ಲಿ ಇನ್ನಾರಿಗೂ ಬರಬಾರದು, ಹಾಗಾಗಿ ಯಾವೆಲ್ಲಾ ದಂಪತಿಗೆ ಇಂತಹ ಕಷ್ಟ ಬಂದಿದೆಯೋ ಅವರು ಇಲ್ಲಿ ಬಂದು ದರ್ಶನ ಮಾಡಿದ್ರೆ ಅವರ ಕಷ್ಟ ನೀಗಿಸುತ್ತೇನೆ ಎಂದು ಆಶೀರ್ವಾದ ಮಾಡಿದ್ದನಂತೆ. ಹಾಗೆ ಹರಕೆ ಹೊತ್ತವರು ಈ ದೇವಸ್ಥಾನದಲ್ಲಿ ಬೆಳ್ಳಿಕೊಡೆ ಮತ್ತು ಸ್ವರ್ಣ ಕೊಡೆ ಸಮರ್ಪಣೆ ಮಾಡ್ತಾರೆ.

ಕೊಟ್ಟಿಯೂರಿನಲ್ಲಿ ಓಡಪೂವು ಹೂವೇ ವಿಶೇಷ!

ಕೇರಳದ ಕೊಟ್ಟಿಯೂರು ದೇವಾಲಯದ ಇನ್ನೊಂದು ವಿಶೇಷತೆ ಏನೆಂದ್ರೆ, ಕೊಟ್ಟಿಯೂರು ಕ್ಷೇತ್ರದಲ್ಲಿ ದೇವರ ದರ್ಶನಕ್ಕೂ ಮುನ್ನ ಸಮೀಪವೇ ಹರಿಯುವ ಬಾವಲಿ ನದಿಯಲ್ಲಿ ಮಿಂದೇಳಬೇಕೆಂಬ ಕ್ರಮವಿದೆ. ಹೀಗೆ ಭಕ್ತರು ನದಿಯಲ್ಲಿ ಮಿಂದು ಅಲ್ಲೇ ಸಿಗುವ ಯಾವುದೇ ಕಲ್ಲುಗಳನ್ನು ಆರಿಸಿ ಒಂದಕ್ಕೊಂದು ತಿಕ್ಕುವ ದೃಶ್ಯ ಅಲ್ಲಿ ಕಾಣಬಹುದು. ಅರೇ.. ಇದೇನಿದು ಕಲ್ಲಿಗೆ ಕಲ್ಲನ್ನು ಉಜ್ಜಿ ಬೆಂಕಿ ಸೃಷ್ಟಿಸುತ್ತಿದ್ದಾರೋ ಎಂಬ ಪ್ರಶ್ನೆ ಮೂಡುವುದು ಸಹಜ. ಆದ್ರೆ, ಇದು ಈ ಪುಣ್ಯಕ್ಷೇತ್ರದ ವಿಶೇಷತೆ. ಯಾವುದೇ ಎರಡು ಕಲ್ಲುಗಳನ್ನು ಆರಿಸಿ ಅವುಗಳನ್ನು ಒಂದಕ್ಕೊಂದು ಉಜ್ಜಿದರೆ ಗಂಧ ಪ್ರಸಾದ ಸೃಷ್ಟಿಯಾಗುತ್ತದೆ. ಅವುಗಳನ್ನು ಭಕ್ತರು ಭಕ್ತಿಯಿಂದ ಹಣೆಗೆ ಹಚ್ಚಿಕೊಳ್ಳುತ್ತಾರೆ. ಕೊಟ್ಟಿಯೂರು ಕ್ಷೇತ್ರದ ಮತ್ತೊಂದು ವಿಶೇಷತೆ ಅಂದ್ರೆ ಓಡಪೂವು. ಕೊಟ್ಟಿಯೂರ್ ಉತ್ಸವಕ್ಕೆ ಭೇಟಿ ನೀಡಿದಾಗ, ಅಂಗಡಿಗಳಲ್ಲಿ ಮತ್ತು ರಸ್ತೆಬದಿಗಳಲ್ಲಿ ಈ ಬಿಳಿ ಹೂವುಗಳು ನೇತು ಹಾಕಿರುವುದನ್ನು ಕಾಣ್ಬೋದು.. ಆ ಹೂವಿನ ಹೆಸರು ಓಡಪೂವು. ಉಗ್ರ ಸ್ವರೂಪಿ ವೀರಭದ್ರ ದಕ್ಷನ ತಲೆ ಕಡಿದು ಆತನ ಗಡ್ಡವನ್ನು ಕಿತ್ತು ಎಸೆಯುತ್ತಾನೆ. ಅವನು ಎಸೆದ ಗಡ್ಡವು ಈ ಓಡಪೂವಾಗಿ ಬದಲಾಯಿತು ಎಂಬ ಪ್ರತೀತಿ ಇದೆ. ಇತರ ಕೆಲವು ನಂಬಿಕೆಗಳ ಪ್ರಕಾರ, ದಕ್ಷ ಯಜ್ಞವನ್ನು ಮುನ್ನಡೆಸಿದ ಭೃಗು ಮಹರ್ಷಿ ಮತ್ತು ಅವನೊಂದಿಗಿದ್ದ ಇತರ ಋಷಿಗಳ ಗಡ್ಡವನ್ನು ವೀರಭದ್ರ ಮತ್ತು ಇತರ ರಾಕ್ಷಸರು ಕಿತ್ತುಹಾಕಿ ಎಸೆಯುತ್ತಾರೆ. ಈ ಗಡ್ಡಗಳೇ ಓಡಪೂವುಗಳಾಗಿ ಬದಲಾದವು ಎನ್ನುವ ಪ್ರತೀತಿ ಇದೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 154

You cannot copy content of this page