Sullia : ‘ಅಪ್ಪ’ ಅಂದ್ರೆ ಎಲ್ಲರ ಬದುಕಿನ ದಾರಿದೀಪ. ಪದಗಳಿಗೆ ನಿಲುಕದಷ್ಟು ಭಾವನೆಗಳನ್ನು ಹೊರಹಾಕುವ ಶಕ್ತಿ. ಈ ಒಂದು ವಿಷಯವನ್ನಿಟ್ಟುಕೊಂಡು ಅರೆಭಾಷೆಯಲ್ಲಿ ಇದೀಗ ನಾಟಕ ಸಿದ್ಧಗೊಳ್ಳುತ್ತಿದೆ. ಹಲವು ಆಯಾಮಗಳಲ್ಲಿ ನಿರ್ದೇಶನಗೊಳ್ಳುತ್ತಿರುವ ಈ ನಾಟಕದ ಪ್ರದರ್ಶನಕ್ಕೆ ಕ್ಷಣಗಣನೆ ಶುರುವಾಗಿದೆ.
ವಾಸ್ತವತೆಗೆ ಹತ್ತಿರವೆನಿಸುವ ನಾಟಕ ;
ಕರ್ನಾಟಕ ರಾಜ್ಯ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯ ಆಯೋಜನೆಯಲ್ಲಿ ಸುಳ್ಯದ ಕಲಾವಿದರ ಕೂಡುವಿಕೆಯಲ್ಲಿ ಹೊಚ್ಚ ಹೊಸ “ಅಪ್ಪ” ಅರೆಭಾಷೆ ನಾಟಕ ಸಿದ್ಧಗೊಳ್ಳುತ್ತಿದೆ. ಅರೆಭಾಷಿಕರ ಗ್ರಾಮೀಣ ಬದುಕು ಮತ್ತು ಆಚಾರ ವಿಚಾರ ಹಾಗೂ ಸಂಸ್ಕೃತಿಗಳು ಹಾಗೂ ವಾಸ್ತವತೆಗಳ ಒಳಗೊಂಡ ಕಲಾ ವಸ್ತು ನಾಟಕದ ರೂಪದಲ್ಲಿ ಮೂಡಿಬರಲಿದ್ದು, ಮನುಷ್ಯ ಭೂಮಿಯ ಮೇಲೆ ಹುಟ್ಟಿದ ಬಳಿಕ ಆತನ ಜವಾಬ್ದಾರಿಗಳು ಏನು…? ಕರ್ತವ್ಯಗಳು ಏನೆಂಬುದನ್ನು ಬಿಂಬಿಸುವ ನಾಟಕವಾಗಿ “ಅಪ್ಪ” ಹೊರಬರಲಿದೆ. ಇದಕ್ಕೆ ಹೊಂದಿಕೆಯಾಗುವಂತಹ ಅರೆಭಾಷೆ ಹಾಡುಗಳು ರೆಕಾರ್ಡ್ ಆಗಿದ್ದು, ರಂಗಸಜ್ಜಿಕೆಗಾಗಿ ತಯಾರಿ ನಡೆಯುತ್ತಿದೆ.
ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರದರ್ಶನಗೊಳ್ಳಲಿದೆ ;
ಸುಳ್ಯ ತಾಲೂಕಿನ ಒಟ್ಟು 20 ಮಂದಿ ಕಲಾವಿದರನ್ನು ಹಾಗೂ ತಂತ್ರಜ್ಞರನ್ನು ಒಳಗೊಂಡ ನಾಟಕ ತಂಡ ರೂಪುಗೊಳ್ಳುತ್ತಿದ್ದು ಪ್ರಥಮ ಪ್ರಯೋಗವಾಗಿ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ರಂಗ ಮಂದಿರದಲ್ಲಿ ನವೆಂಬರ್ 27ರಂದು ಸಂಜೆ 6 ಗಂಟೆಗೆ ಮೊದಲ ಉದ್ಘಾಟನಾ ಪ್ರದರ್ಶನವಾಗಲಿದ್ದು ನ.30 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಾಗೂ ರಾಜ್ಯದಾದ್ಯಂತ ಬೇರೆ ಬೇರೆ ಜಿಲ್ಲೆಗಳಲ್ಲಿ ರಂಗ ಪ್ರದರ್ಶನ ಕಾಣಲಿದೆ.
ಕಲಾವಿದರಲ್ಲದವರನ್ನೂ ಜೊತೆ ಸೇರಿಸಿ ನಾಟಕ ತಯಾರಿ ;
ಈ ನಾಟಕದ ಪೂರ್ವ ತಯಾರಿ ನಿರಂತರ ಒಂದು ತಿಂಗಳಿನಿಂದ ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ರಂಗ ಮಯೂರಿ ಕಲಾ ಶಾಲೆ ಯ ರಂಗ ವೇದಿಕೆಯಲ್ಲಿ ರಂಗ ನಿರ್ದೇಶಕ ಸಂಚಾಲಕ ಲೋಕೇಶ್ ಊರುಬೈಲು ರವರ ಸಮರ್ಥ ನಿರ್ದೇಶನದಲ್ಲಿ ತಾಲೂಕಿನ ಬೇರೆ ಬೇರೆ ಪ್ರದೇಶದ ಹಾಗೂ ಬೇರೆ ಬೇರೆ ವರ್ಗದ ಕಲಾವಿದರಲ್ಲದವರನ್ನು ಪಾತ್ರಧಾರಿಗಳಾಗಿ ಸೇರಿಸಿಕೊಂಡು ಕಲಾವಿದರಾಗಿ ರೂಪುಗೊಳಿಸುವಲ್ಲಿ ನಿರಂತರ ಪ್ರಯತ್ನದಲ್ಲಿ ತೊಡಗಿಸಿಕೊಂಡಿರುತ್ತಾರೆ. ಇದರಲ್ಲಿ ಅಕಾಡೆಮಿ ಅಧ್ಯಕ್ಷರು ಸದಾನಂದ ಮಾವಜಿ ಕೂಡಾ ಸದಾ ಪ್ರೋತ್ಸಾಹ ನೀಡುತ್ತಿರುವುದು ಉಲ್ಲೇಖನೀಯ. ವಿಶೇಷವೇಂದರೆ, ಈ ನಾಟಕದಲ್ಲಿ ಹೊಸ ಕಲಾವಿದರು, ಮೊದಲ ಬಾರಿಗೆ ವೇದಿಕೆಯನ್ನು ಬಳಸಿಕೊಳ್ಳುವವರಿಗೂ ಅವಕಾಶವನ್ನು ನೀಡಿ, ಅವರ ಪ್ರತಿಭೆಯನ್ನು ಹೊರತರಲಾಗಿದೆ. ‘ಅಪ್ಪ’ ಹೆಸರಿನ ನಾಟಕದಲ್ಲಿ ಯಾವೆಲ್ಲಾ ವಿಷಯಗಳು ಅಡಕವಾಗಿವೆ, ಕಥೆ ಯಾವ ರೀತಿ ತಿರುವು ಪಡೆಯುತ್ತದೆ ಎಂಬುವುದನ್ನು ನಾಟಕ ನೋಡಿಯೇ ತಿಳಿದುಕೊಳ್ಳಬೇಕಾಗುತ್ತದೆ.
ಇದನ್ನೂ ಓದಿ :Sabarimala: ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಕ್ಯೂನಲ್ಲಿ ನಿಂತಿದ್ದ 58 ವರ್ಷದ ಮಹಿಳೆ ಕುಸಿದು ಸಾವು..!
………
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/hOy5CycSYqo?si=kN5HjWltTutQOZjM











