D. K. Shivakumar: ಇಂದಿರಾ ಗಾಂಧಿ ಅವರು ದೇಶದ ಮಹಿಳಾ ಶಕ್ತಿಯ ಚಿಹ್ನೆ. ದೇಶ ಪ್ರೇಮ, ದೃಢ ನಿಶ್ಚಯ, ಧೈರ್ಯದ ಪ್ರತೀಕವಾಗಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಬುಧವಾರ ನಡೆದ ಇಂದಿರಾ ಗಾಂಧಿ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಅವರು ಮಾತನಾಡಿದರು.
ದೇಶದ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರ ಜನ್ಮದಿನ ಆಚರಿಸುತ್ತಿದ್ದೇವೆ. ಇಂದು ಬೆಳಗ್ಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಇಂದಿರಾ ಗಾಂಧಿ ಅವರ ಸಮಾಧಿಗೆ ಹೋಗಿ ಗೌರವ ಸಲ್ಲಿಸಿದ್ದಾರೆ. ಸೋನಿಯಾ ಗಾಂಧಿ ಅವರು ನನನ್ನು ಕರೆದು ಅವರ ಸಮಾಧಿ ಸುತ್ತಮುತ್ತಲ ಜಾಗ ಅಭಿವೃದ್ಧಿ ಪಡಿಸಲು ಸೂಚಿಸಿದ್ದರು. ಜೊತೆಗೆ ಪೆರಂಬೂರಿನಲ್ಲಿರುವ ರಾಜೀವ್ ಗಾಂಧಿ ಅವರ ಸಮಾಧಿಗೆ ಗ್ರಾನೈಟ್ ಹಾಕುವ ಭಾಗ್ಯ ನನಗೆ ಸಿಕ್ಕಿದೆ. ನಾನು ಹಾಗೂ ನನ್ನ ಸಹೋದರ ನಮ್ಮದೇ ಕ್ವಾರೆಯಿಂದ ಗ್ರಾನೈಟ್ ಕಲ್ಲನ್ನು ತೆಗೆದುಕೊಂಡು ಹೋಗಿ ಅಲ್ಲಿ ಹಾಕಿ ನಮ್ಮ ಕೈಲಾದ ಸೇವೆ ಮಾಡುವ ಭಾಗ್ಯ ಸಿಕ್ಕಿತು” ಎಂದು ಸ್ಮರಿಸಿದರು.
“ಇಂದಿರಾ ಗಾಂಧಿ ಅವರ ಹತ್ಯೆಯಾದ ದಿನ ನಾವು ಯೂಥ್ ಕಾಂಗ್ರೆಸ್ ಸಮ್ಮೇಳನಕ್ಕಾಗಿ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದೆವು. ಇಂದಿರಾ ಗಾಂಧಿ ಅವರ ಹತ್ಯೆ ಹಿನ್ನೆಲೆಯಲ್ಲಿ ರೈಲು ಅರ್ಧದಾರಿಯಲ್ಲೇ ನಿಂತಿತು. ಆಗ ನಾನು ಪ್ರವಾಸಿ ಚಿತ್ರಮಂದಿರ ಆರಂಭಿಸಲು ಅರ್ಜಿ ಹಾಕಿದ್ದೆ. ಅದಕ್ಕೆ ನಾನು ಇಂದಿರಾ ಜೀ ಚಿತ್ರಮಂದಿರ ಎಂದು ಹೆಸರಿಟ್ಟೆ. ಇಂದಿರಾ ಗಾಂಧಿ ಅವರ ನಿಧನದ ನಂತರ ರಾಜೀವ್ ಗಾಂಧಿ ಅವರು ನಾಯಕತ್ವ ವಹಿಸಿದರು. ನನಗೆ ಹಾಗೂ ವಿನಯ್ ಕುಮಾರ್ ಸೊರಕೆ ಅವರು ವಿದ್ಯಾರ್ಥಿ ನಾಯಕರಾಗಿದ್ದೆವು ಎಂದು ಮೆಲುಕು ಹಾಕಿದರು.
ಬಡತನ ನಿರ್ಮೂಲನೆಗೆ 20 ಅಂಶಗಳ ಕಾರ್ಯಕ್ರಮದ ಮೂಲಕ ಯುದ್ಧ ಸಾರಿದ್ದು ಇಂದಿರಾ ಗಾಂಧಿ!
ಇಂದಿರಾ ಗಾಂಧಿ ಅವರು ಬಡತನ ನಿರ್ಮೂಲನೆಗೆ 20 ಅಂಶಗಳ ಮೂಲಕ ಹೋರಾಟ ಆರಂಭಿಸಿದರು. ಉಳುವವನಿಗೆ ಭೂಮಿ ಕೊಟ್ಟಿದ್ದರೆ ಅದು ಇಂದಿರಾ ಗಾಂಧಿ ಅವರು. ಈ ಯೋಜನೆಯಲ್ಲಿ ಲಕ್ಷಾಂತರ ಜನ ಫಲಾನುಭವಿಗಳಿದ್ದಾರೆ. ರಾಜ್ಯದಲ್ಲಿ ಭಾರತ ಜೋಡೋ ಯಾತ್ರೆ ಮಾಡುವಾಗ ಮೊಳಕಾಲ್ಮೂರು ಸಮೀಪ ವೃದ್ಧ ಮಹಿಳೆಯೊಬ್ಬರು ಬಂದು ರಾಹುಲ್ ಗಾಂಧಿ ಅವರಿಗೆ ಸೌತೇಕಾಯಿ ತಂದು ಕೊಟ್ಟು, ಇದು ನಿಮ್ಮ ಅಜ್ಜಿ ಕೊಟ್ಟ ಭೂಮಿಯಲ್ಲಿ ಬೆಳೆದಿದ್ದು ಎಂದು ಹೇಳಿದರು. ಇಂದಿರಾ ಗಾಂಧಿ ಅವರ ಕೆಲಸಗಳ ಪೈಕಿ ಬ್ಯಾಂಕುಗಳ ರಾಷ್ಟ್ರೀಕರಣ ಬಹು ದೊಡ್ಡ ನಿರ್ಧಾರ. ಅದು ಇಲ್ಲವಾಗಿದ್ದರೆ ನಮಗೆ ಸಾಲ ಕೊಡುವವರೇ ಇರುತ್ತಿರಲಿಲ್ಲ.
ತಂದಾಗ ಬಹಳಷ್ಟು ಟೀಕೆ ಮಾಡಿದರು. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗಗಳು ಅದಿಕಾರಕ್ಕೆ ಬಂದಂತೆ. ಇಂದಿರಾ ಗಾಂಧಿ ಅವರ ನುಡಿಮುತ್ತುಗಳನ್ನು ಸಂಗ್ರಹಿಸಿ ಸೋನಿಯಾ ಗಾಂಧಿ ಅವರು ಪುಸ್ತಕ ಬರೆದಿದ್ದರು. ಅದನ್ನು ನಾನು ಕನ್ನಡದಲ್ಲಿ ಅನುವಾದ ಮಾಡಿ ಪುಸ್ತಕ ಮಾಡಿ, ಇಂದು ಬಿಡುಗಡೆ ಮಾಡಿಸಿದ್ದೇನೆ ಎಂದರು.
ಇಂದಿರಾ ಆಡಳಿತದಲ್ಲಿ ನೆರೆ ರಾಷ್ಟ್ರಗಳ ಜೊತೆಗಿನ ಸ್ನೇಹ ಉತ್ತಮವಾಗಿತ್ತು!
ಮಹಾಲಕ್ಷ್ಮಿಯ ಮತ್ತೊಂದು ಹೆಸರು ಇಂದಿರಾ. ಇಂದಿರಾ ಗಾಂಧಿ ಶತಮಾನ ಕಂಡ ಅತ್ಯುತ್ತಮ ನಾಯಕಿ, ಹಾಗೂ ವಿಶ್ವ ಕಂಡ ಶ್ರೇಷ್ಠ ಮಹಿಳಾ ಪ್ರಧಾನಿ. ಅವರ ಆಡಳಿತದಲ್ಲಿ ಪಾಕಿಸ್ತಾನವನ್ನು ಇಬ್ಭಾಗ ಮಾಡಿ ಬಾಂಗ್ಲಾದೇಶ ರಚನೆಗೆ ಕಾರಣರಾದರು. ಅವರ ನೀತಿಯಿಂದ ನಮ್ಮ ನೆರೆಯ ರಾಷ್ಟ್ರಗಳು ಸೇರಿದಂತೆ ವಿಶ್ವದ ಎಲ್ಲಾ ರಾಷ್ಟ್ರಗಳು ನಮ್ಮ ಮಿತ್ರರಾಗಿದ್ದವು. ಆದರೆ ಈಗ ನಮ್ಮ ನೆರೆ ರಾಷ್ಟ್ರಗಳಾದ ಭೂತಾನ್, ಬರ್ಮಾ ದೇಶಗಳು ನಮ್ಮ ಜೊತೆ ನಿಲ್ಲುತ್ತಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರು ಇಂದಿರಾ ಗಾಂಧಿ ಅವರನ್ನು ದುರ್ಗೆ ಎಂದು ಕರೆದರು. ಅಟಲ್ ಬಿಹಾರಿ ವಾಜಪೇಯಿ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾಗ ಅವರನ್ನು ವಿದೇಶಕ್ಕೆ ಕಳುಹಿಸಿ ಚಿಕಿತ್ಸೆ ಕೊಡಿಸಿದ್ದರು. ಇದು ಕಾಂಗ್ರೆಸ್ ಮುಖಂಡರಿಗೆ ಇದ್ದ ಹೃದಯ ವೈಶಾಲ್ಯತೆ” ಎಂದು ಶ್ಲಾಘಿಸಿದರು.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











