Shivanasamudra : ಮಳವಳ್ಳಿ ತಾಲೂಕು ಶಿವನಸಮುದ್ರ ಬಳಿಯ ಖಾಸಗಿ ವಿದ್ಯುತ್ ಉತ್ಪಾದನಾ ಘಟಕಕ್ಕೆ ನೀರು ಪೂರೈಸುವ ನಾಲೆಯಲ್ಲಿ ಮರಿ ಕಾಡಾನೆ 3 ದಿನಗಳಿಂದ ಸಿಲುಕಿಕೊಂಡಿರುತ್ತದೆ. ಅಲ್ಲಿಂದ ಹೊರಬರಲಾಗದೆ ಅದು ವೇದನೆ ಅನುಭವಿಸುತ್ತಿದ್ದು, ಕಾವೇರಿ ನದಿಯಲ್ಲಿ ನೀರು ಹರಿವಿನ ಪ್ರಮಾಣ ಕಡಿಮೆ ಮಾಡಿ ಆನೆಯನ್ನು ರಕ್ಷಿಸುವ ಕಾರ್ಯಚರಣೆ ಮುಂದುವರೆಯುತ್ತಿತ್ತು. ರಾತ್ರಿ ನಾಲೆಯಲ್ಲಿ ಸಿಲುಕಿದ ಆನೆ ಮರಿಯನ್ನು ಭಾನುವಾರ ಬೆಳಗ್ಗೆಯಿಂದಲೇ ರಕ್ಷಿಸುವ ಪ್ರಯತ್ನ ಮಾಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಕಾವೇರಿ ನದಿಯಲ್ಲಿ ನೀರು ಹರಿವಿನ ಪ್ರಮಾಣ ಹೆಚ್ಚಾಗಿರುವ ಕಾರಣ ಕಾಡಾನೆಯನ್ನು ಹೊರಗೆ ತೆಗೆಯುವ ಪ್ರಯತ್ನ ವಿಫಲಗೊಂಡಿತ್ತು.
ಮೊದಲಿಗೆ ಪಟಾಕಿ ಸಿಡಿಸಿ ತಾನಾಗಿಯೇ ಕಾಡಾನೆ ಮೇಲಕ್ಕೆ ಬರುವಂತೆ ಪ್ರಯತ್ನಿಸಲಾಯಿತು. ಆದರೆ ಅದು ಸಾಧ್ಯವಾಗಿಲ್ಲ. ಹೀಗಾಗಿ ಅರಣ್ಯ ಇಲಾಖೆ ಕಂಟೇನರ್ ಬಳಿಸಿ ಕಾಡಾನೆಯನ್ನು ಮೇಲಕ್ಕೆ ತಂದಿದೆ. ಕಾಡಾನೆಗೆ 2 ಬಾರಿ ಅರಿವಳಿಕೆ ಚುಚ್ಚುಮದ್ದು ನೀಡಿ ಅದು ಪ್ರಜ್ಞೆ ಕಳೆದುಕೊಂಡ ಬಳಿಕ ಅದನ್ನು ಕ್ರೇನ್ ಮೂಲಕ ಮೇಲಕ್ಕೆ ತಂದು ಚಿಕಿತ್ಸೆ ನೀಡಲಾಯಿತು. ಬಳಿಕ ಆನೆ ಪ್ರಜ್ಞೆಗೆ ಮರಳಿದ ಬಳಿಕ ಆನೆಯನ್ನು ಹಲಗೂರು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಅರಣ್ಯ ಸಿಬ್ಬಂದಿ ಹಾಗೂ ವೈದ್ಯರ ತಂಡ ಕೂಡ ಕಾಡಿಗೆ ತೆರಳಿದ್ದು ಆನೆಯ ಮೇಲ್ವಿಚಾರಣೆಯಲ್ಲಿ ತೊಡಗಿರುವುದು ವರದಿಯಾಗಿದೆ.
ಅರಣ್ಯ ಇಲಾಖೆಯವರ ಈ ಸಾಹಸಕ್ಕೆ ಅರಣ್ಯ ಸಚಿವರು ಈಶ್ವರ್ ಖಂಡ್ರೆ ಶ್ಲಾಘಿಸಿರುತ್ತಾರೆ. ಈ ಮರಿ ಕಾಡಾನೆ ನೀರು ಕುಡಿಯಲು ಹೋದ ಸಂದರ್ಭದಲ್ಲಿ ಇಳಿಯುವಾಗ ಜಾರಿದ್ದು, ಕೊಚ್ಚಿಕೊಂಡು ಹೋಗಿ ಪವರ್ ಸ್ಟೇಷನ್ ಘಟಕಕ್ಕೆ ನೀರು ಪೂರೈಸುವ ನಾಲೆಯ ಬಳಿ ಬಂದಿರಬಹುದು ಎನ್ನಲಾಗಿತ್ತು. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಬಹಳ ಜಾಗರೂಕತೆಯಿಂದ ನಾಜೂಕಾಗಿ ಮರಿ ಆನೆಯನ್ನು ಮೇಲೆ ತಂದಿರುವುದು ಸಂತಸ ನೀಡಿದೆ. ಈ ಮರಿ ಆನೆಗೆ ಹತ್ತರಿಂದ ಹದಿನೈದು ವರ್ಷ ಪ್ರಾಯವಿರಬಹುದೆಂದು ಹೇಳಲಾಗಿದೆ.
ಇದನ್ನೂ ಓದಿ :Menstrual Leave : ಮುಟ್ಟಿನ ರಜೆ ನೀಡಿದ ಕಂಪೆನಿ : ವೈರಲ್ ಆಗುತ್ತಿದೆ ಪೋಸ್ಟ್…!
………
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/vXhwD33EPDk?si=X_2dbBQ9nQskoiXO











