Delhi Blast: ನವದೆಹಲಿಯ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ಸಂಜೆ ಭೀಕರ ಕಾರು ಸ್ಪೋಟ ಸಂಭವಿಸಿದ್ದು, ಇಡೀ ದೇಶವೇ ಬೆಚ್ಚಿ ಬೆರಗಾಗುವಂತೆ ಮಾಡಿದೆ. ಇದೀಗ ಈ ಸ್ಟೋಟದ ಹಿಂದಿರುವ ಮಾಸ್ಟರ್ ಮೈಂಡ್ ಯಾರು ಅನ್ನೋ ಹುಡುಕಾಟ ಶುರುವಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾರು ಸ್ಪೋಟದಲ್ಲಿ ಕನಿಷ್ಠ 10 ಜನರು ಸಾವಿಗೀಡಾಗಿದ್ದಾರೆ. 20 ಮಂದಿ ಗಾಯಗೊಂಡಿದ್ದಾರೆ. ನಿಗೂಢ ಕಾರು ಸ್ಫೋಟ ಸಂಭವಿಸಿರುವುದು ನಿಜಕ್ಕೂ ಭಯಾನಕವಾಗಿದೆ. ಇನ್ನು ಲಕ್ನೋದ ಫರಿದಾಬಾದ್ ಸ್ಫೋಟಕ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮೌಲ್ವಿ ದಂಪತಿಯನ್ನು ಬಂಧಿಸಲಾಗಿದೆ.
ಶ್ರೀನಗರ ಪೊಲೀಸ್ & ಕೌಂಟರ್ ಇಂಟಲಿಜೆನ್ಸ್ ಕಾಶ್ಮೀರ ಜಂಟಿ ಕಾರ್ಯಾಚರಣೆ ನಡೆಸಿ, ಜಂಟಿ ಭದ್ರತಾ ಪಡೆಗಳು ಮೌಲ್ವಿ ಇಮಾಮ್ ಇರ್ಫಾನ್ ಅಹ್ಮದ್ ವಾಗೆಯನ್ನು ಬಂಧಿಸಿವೆ.ಕಾರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಫರಿದಾಬಾದ್ನಲ್ಲಿ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ, ಫರಿದಾಬಾದ್ನ ಎರಡು ಬಾಡಿಗೆ ಮನೆಗಳಿಂದ ಸುಮಾರು 2,900 ಕೆಜಿ ಸ್ಫೋಟಕಗಳನ್ನು (ಹೆಚ್ಚಾಗಿ ಅಮೋನಿಯಂ ನೈಟ್ರೇಟ್) ವಶಪಡಿಸಿಕೊಳ್ಳಲಾಗಿದೆ.
ಜೊತೆಗೆ ಶಸ್ತ್ರಾಸ್ತ್ರಗಳು ಮತ್ತು ಡಿಟೋನೇಟರ್ಗಳು ಸಹ ದೊರೆತಿವೆ. ಈ ಸ್ಫೋಟಕಗಳನ್ನು ಸಂಗ್ರಹಿಸಿದ್ದ ಆರೋಪದ ಮೇಲೆ ಕಾಶ್ಮೀರಿ ವೈದ್ಯರಾದ ಡಾ. ಮುಜಾಮಿಲ್ ಶಕೀಲ್ ಮತ್ತು ಇತರ ಮೂವರು ವೈದ್ಯರನ್ನು ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಫರಿದಾಬಾದ್ನಲ್ಲಿ ಸ್ಫೋಟಕ ಪತ್ತೆಯಾದ ಕೆಲವೇ ಗಂಟೆಗಳ ನಂತರ, ದೆಹಲಿಯ ಕೆಂಪು ಕೋಟೆ ಬಳಿ ಕಾರಿನಲ್ಲಿ ಸ್ಫೋಟ ಸಂಭವಿಸಿತ್ತು.
ದೆಹಲಿ ಸ್ಫೋಟದ ಹಿಂದಿದ್ದ ಶಂಕಿತ (ಡಾ. ಉಮರ್ ಮೊಹಮ್ಮದ್) ಗಾಬರಿಯಾಗಿ ಅಪೂರ್ಣ ಬಾಂಬ್ ಅನ್ನು ಸ್ಫೋಟಿಸಿರಬಹುದು ಎಂದು ತನಿಖಾ ಸಂಸ್ಥೆಗಳು ಶಂಕಿಸಿವೆ. ಸದ್ಯಕ್ಕೆ, ದೆಹಲಿ ಸ್ಫೋಟದ ತನಿಖೆಯ ಭಾಗವಾಗಿ ಫರಿದಾಬಾದ್ನಲ್ಲಿ ಸ್ಫೋಟಕ ವಸ್ತುಗಳ ಜಾಲವನ್ನು ಬಯಲಿಗೆ ತರಲಾಗಿದೆ. ಇನ್ನು ಮೌಲ್ವಿ ಮನೆಯಿಂದ ಐದು ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆತನ ಪತ್ನಿಯನ್ನು ಶಂಕಿತ ಮೂಲಭೂತವಾದ ಸಂಪರ್ಕದ ಮೇಲೆ ಬಂಧಿಸಲಾಗಿದೆ. ಇರ್ಫಾನ್ ಅಹ್ಮದ್ ವಾಗೆ, ವೈಟ್-ಕಾಲರ್’ ಭಯೋತ್ಪಾದಕ ಮಾಡ್ಯೂಲ್ನ ಹಿಂದಿನ ಮಾಸ್ಟರ್ ಮೈಂಡ್ ಎಂದು ಶಂಕಿಸಲಾಗಿದೆ. ಈತ ವೈದ್ಯಕೀಯ ವೃತ್ತಿಪರರು ಮತ್ತು ವಿದ್ಯಾರ್ಥಿಗಳನ್ನು ಮೂಲಭೂತವಾದಿಗಳನ್ನಾಗಿ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











