Vote Chori: ಮತ ಕಳ್ಳತನ ವಿರುದ್ಧ ಸಹಿ ಸಂಗ್ರಹ ಅಭಿಯಾನದಲ್ಲಿ ರಾಜ್ಯದ 1,12,41,000 ಸಹಿಗಳನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಎಐಸಿಸಿಗೆ ಹಸ್ತಾಂತರಿಸಿದ್ದಾರೆ. ಮತ ಕಳ್ಳತನ ವಿರುದ್ಧದ ಸಹಿ ಸಂಗ್ರಹ ಅಭಿಯಾನವನ್ನು ಕರ್ನಾಟಕದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದ್ದು, ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ರಾಜ್ಯದಲ್ಲಿ ಸಂಗ್ರಹಿಸಲಾದ 1,12,41,000 ಸಹಿಗಳ ದಾಖಲೆಗಳನ್ನು ಎಐಸಿಸಿಗೆ ಸಲ್ಲಿಸಿದರು.
ದೆಹಲಿಯಲ್ಲಿರುವ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಸೋಮವಾರ ಭೇಟಿ ನೀಡಿದ ಶಿವಕುಮಾರ್ ಅವರ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಮುಖಂಡರ ನಿಯೋಗವು ಸಹಿ ಸಂಗ್ರಹ ದಾಖಲೆಗಳ ಒಂದು ಪೆಟ್ಟಿಗೆಯನ್ನು ಸಾಂಕೇತಿಕವಾಗಿ ಸಲ್ಲಿಸಿದರು. ನಂತರ ಉಳಿದ ಪೆಟ್ಟಿಗೆಗಳನ್ನು ಎಐಸಿಸಿ ನೂತನ ಕಟ್ಟಡ ಇಂದಿರಾ ಭವನದಲ್ಲಿ ಎಐಸಿಸಿ ಕಾರ್ಯದರ್ಶಿ ನೆಟ್ಟ ಡಿಸೋಜ ಅವರಿಗೆ ಹಸ್ತಾಂತರಿಸಲಾಯಿತು.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ 40 ಜಿಲ್ಲೆಗಳಲ್ಲಿ (ರಾಜಕೀಯ ಉದ್ದೇಶಕ್ಕಾಗಿ ರಚಿಸಿಕೊಂಡಿರುವ ಜಿಲ್ಲೆಗಳು) ಸಹಿ ಸಂಗ್ರಹಿಸಲಾಗಿದೆ. ರಾಜ್ಯದಲ್ಲಿ ನಡೆದ ಅಭಿಯಾನದಲ್ಲಿ ಅತಿ ಹೆಚ್ಚು ಸಹಿ ಸಂಗ್ರಹಿಸಿದ ಜಿಲ್ಲಾಧ್ಯಕ್ಷರುಗಳು ಕೂಡ ಶಿವಕುಮಾರ್ ಅವರ ಜೊತೆಯಲ್ಲಿ ದೆಹಲಿಗೆ ಹೋಗಿ ಸಹಿ ಸಂಗ್ರಹ ದಾಖಲೆಗಳನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್, ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ ಜಿ ಸಿ ಚಂದ್ರಶೇಖರ್, ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಸೊರಕೆ ಮತ್ತಿತರರು ಉಪಸ್ಥಿತರಿದ್ದರು.
ಸಹಿಸಂಗ್ರಹ ಅಭಿಯಾನ ಯಾಕೆ..?
ಸಹಿ ಸಂಗ್ರಹ ಅಭಿಯಾನವು ಚುನಾವಣಾ ಆಯೋಗದ ಮತದಾರರ ಪಟ್ಟಿಯಲ್ಲಿ ಅಕ್ರಮಗಳು ಮತ್ತು ಮತಗಳ್ಳತನ ನಡೆದಿದೆ ಎಂದು ಆರೋಪಿಸಿ ಈ ಅಭಿಯಾನ ನಡೆಸಲಾಯಿತು. ವೋಟ್ ಚೋರಿ ವಿರುದ್ಧ ಸಹಿ ಸಂಗ್ರಹ ನಡೆಸಿದ್ದ ಕಾಂಗ್ರೆಸ್ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆಸಿದ ಅಭಿಯಾನದಲ್ಲಿ ಮತದಾರರು ಭಾಗಿಯಾಗಿದ್ದಾರೆ. ಹೀಗಾಗಿ ದಾಖಲೆ ಮಟ್ಟದಲ್ಲಿ ಸಹಿ ಸಂಗ್ರಹವಾಗಿದೆ. ರಾಜ್ಯದಲ್ಲಿ ಸಂಗ್ರಹವಾದ ಸಾಮಾನ್ಯಜನರ ಸಹಿ ಈಗ ದೆಹಲಿಗೆ ತಲುಪಿಸಲು ಕಾಂಗ್ರೆಸ್ ಮುಂದಾಗಿದೆ. ಇದೀಗ ಇದೇ ಸಮಯದಲ್ಲಿ, ಬೆಂಗಳೂರಿನಲ್ಲಿನ ರಸ್ತೆ ಗುಂಡಿಗಳು ಮತ್ತು ಕಸ ವಿಲೇವಾರಿ ಸಮಸ್ಯೆಗಳ ವಿರುದ್ಧ ವಿರೋಧ ಪಕ್ಷವಾದ ಬಿಜೆಪಿ ಸಹಿ ಸಂಗ್ರಹ ಅಭಿಯಾನವನ್ನು ನಡೆಸುವುದಾಗಿ ಘೋಷಿಸಿದೆ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











