Bengaluru: ಕಾಂಗ್ರೆಸ್ ಕಚೇರಿಯ ಭಾರತ ಜೋಡೋ ಭವನದಲ್ಲಿ ಶನಿವಾರ ನಡೆದ ಜಂಟಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಅವರು ಮಾತನಾಡಿದರು.
ಚುನಾವಣಾ ಪ್ರಕ್ರಿಯೆಯ ಸಂಪೂರ್ಣ ಜವಾಬ್ದಾರಿ ಚುನಾವಣಾ ಆಯೋಗದ್ದಾಗಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಆಯೋಗ ಕೆಲಸ ಮಾಡಬೇಕಾಗುತ್ತದೆ. 256 ಬೂತ್ ಗಳಲ್ಲಿ 7250 ಮತಗಳನ್ನು ಫಾರಂ 7 ದುರುಪಯೋಗದ ಮೂಲಕ ಡಿಲೀಟ್ ಮಾಡಿಸಿದ್ದರು. ಉತ್ತರ ಪ್ರದೇಶ, ಬಿಹಾರ, ದೆಹಲಿ, ಜಾರ್ಖಂಡ್ ರಾಜ್ಯಗಳ ಜನರ ಮೊಬೈಲ್ ನಿಂದ ಈ ಅರ್ಜಿ ಸಲ್ಲಿಕೆಯಾಗುತ್ತವೆ. ಈ ಮತದಾರ ಪಟ್ಟಿಯಿಂದ ಹೆಸರು ರದ್ದಾದ 151 ಮತದಾರರು ಫೆ.23ರಂದು ದೂರು ನೀಡುತ್ತಾರೆ.
ಅಂದೇ ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡಲಾಗುತ್ತದೆ. ಈ ಪ್ರಕರಣದ ತನಿಖೆ ವೇಳೆ ತನಿಖಾಧಿಕಾರಿಗಳು ತಮಗೆ ಬೇಕಾದ ಅಗತ್ಯ ಮಾಹಿತಿಗಳನ್ನು ಒದಗಿಸುವಂತೆ 12 ಬಾರಿ ಪತ್ರ ಬರೆದಿದ್ದರೂ ಆಯೋಗವು ಯಾವುದೇ ಮಾಹಿತಿ ನೀಡಿಲ್ಲ. ತನಿಖಾಧಿಕಾರಿಗಳು ಹೊರ ರಾಜ್ಯದ 9 ಮೊಬೈಲ್ ಸಂಖ್ಯೆಗಳನ್ನು ಪತ್ತೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಬಿಜೆಪಿ ಅಭ್ಯರ್ಥಿ ಸುಭಾಷ್ ಗುತ್ತೇದಾರ್ ಅವರು ಮತದಾರ ಪಟ್ಟಿ ಸೇರಿದಂತೆ ಅನೇಕ ದಾಖಲೆಗಳನ್ನು ಸುಟ್ಟು ಹಾಕಿರುವ ಮಾಹಿತಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ಪ್ರಕರಣದಲ್ಲಿ ಒಂದು ಮತ ಡಿಲೀಟ್ ಆದರೆ ಅದಕ್ಕೆ 80 ರೂಪಾಯಿ ಹಣ ನೀಡಲಾಗಿದೆ ಎಂಬ ಅಂಶವೂ ಬೆಳಕಿಗೆ ಬಂದಿದೆ. ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಚಿಲುಮೆ ಸಂಸ್ಥೆಯನ್ನು ಹೇಗೆ ಬಳಸಿಕೊಳ್ಳಲಾಯಿತು ಎಂಬುದನನ್ನು ನಾವು ಬೆಳಕಿಗೆ ತಂದಿದ್ದೆವು. ಈ ಪ್ರಕರಣದ ತನಿಖಾ ವರದಿ ಶೀಘ್ರದಲ್ಲೇ ಬರಲಿದೆ” ಎಂದರು.
ಈಗ ಹರಿಯಾಣ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ರಾಹುಲ್ ಗಾಂಧಿ ಅವರು ಬೆಳಕು ಚೆಲ್ಲಿದ್ದಾರೆ. ಆ ರಾಜ್ಯದ ಚುನಾವಣೆಯಲ್ಲಿ ಒಟ್ಟು 25 ಲಕ್ಷದಷ್ಟು ಮತಗಳು ಅಕ್ರಮವಾಗಿವೆ ಎಂದು ತಿಳಿಸಿದ್ದಾರೆ. ಭಾರತದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸುವುದು ರಾಹುಲ್ ಗಾಂಧಿ ಅವರ ಹೋರಾಟದ ಚಿಂತನೆ. ಕರ್ನಾಟಕ ರಾಜ್ಯದಿಂದಲೇ ಈ ಹೋರಾಟ ಆರಂಭವಾಗಿದ್ದು, ದೇಶದಾದ್ಯಂತ ಜನರಿಂದ ಸಹಿ ಸಂಗ್ರಹ ಮಾಡಿ ಈ ವಿಚಾರದಲ್ಲಿ ರಾಷ್ಟ್ರಪತಿಗಳು ಹಾಗೂ ಚುನಾವಣಾ ಆಯೋಗಕ್ಕೆ ಜನರ ಅಭಿಪ್ರಾಯ ತಿಳಿಸಲು ಈ ಆಂದೋಲನ ಹಮ್ಮಿಕೊಳ್ಳಲಾಗಿದೆ. ಇದು ಕೇವಲ ಕಾಂಗ್ರೆಸ್ ಪಕ್ಷದ ಹೋರಾಟ ಮಾತ್ರವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಮತದಾನದ ಹಕ್ಕು ಉಳಿಸುವ ಹೋರಾಟ. ಈ ಸಹಿ ಸಂಗ್ರಹ ಅಭಿಯಾನದಲ್ಲಿ ಸಾರ್ವಜನಿಕರು ಪಕ್ಷಬೇಧ ಮರೆತು ಭಾಗವಹಿಸಿದ್ದಾರೆ” ಎಂದು ತಿಳಿಸಿದರು.
ಆಳಂದ ಕ್ಷೇತ್ರದ ಅಕ್ರಮದ ತನಿಖೆಯ ವರದಿ ಶೀಘ್ರ..!
ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಶಾಸಕರು ಹಾಗೂ ನಮ್ಮ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಚುನಾವಣೆಗೂ ಮುನ್ನವೇ ಅಕ್ರಮದ ಬಗ್ಗೆ ದೂರು ನೀಡಿ ಆಯೋಗದ ಗಮನ ಸೆಳೆಯುತ್ತಾರೆ. ನಂತರ ಈ ಅಕ್ರಮದ ಬಗ್ಗೆ ತನಿಖೆ ಆರಂಭವಾಗುತ್ತದೆ. ಚುನಾವಣಾ ಆಯೋಗವು ಅಧಿಕೃತ ದೂರು ದಾಖಲಿಸಿಕೊಳ್ಳುತ್ತದೆ. ಆಳಂದದಲ್ಲಿ ಬೆಳಗಿನ ಜಾವ ನಾಲ್ಕು ಗಂಟೆಗೆ ಮತದಾರಪಟ್ಟಿಯಿಂದ ಹೆಸರು ಕೈ ಬಿಡುವಂತೆ ನಕಲಿ ಅರ್ಜಿ ಸಲ್ಲಿಸಲಾಗಿತ್ತು. ಕೇವಲ 17 ನಿಮಿಷಗಳಲ್ಲಿ 14 ಮತಗಳನ್ನು ಬೆಳಗಿನ ಜಾವದಲ್ಲಿ ತೆಗೆದುಹಾಕಲಾಗಿರುತ್ತದೆ. ಈ ರೀತಿ 6 ಸಾವಿರ ಮತ ತೆಗೆಯಲು ಪ್ರಯತ್ನಿಸುತ್ತಾರೆ. ಈ ವಿಚಾರವಾಗಿ ಎಸ್ ಐಟಿ ತನಿಖೆ ನಡೆಯುತ್ತಿದ್ದು, ಈ ತನಿಖೆ ಮೂಲಕ ಹೊರ ರಾಜ್ಯದವರು ಹಾಗೂ ಅವರ ದೂರವಾಣಿ ಸಂಖ್ಯೆ ಮೂಲಕ ಮತಗಳನ್ನು ತೆಗೆಸಲು ಷಡ್ಯಂತ್ರ ಮಾಡಲಾಗಿತ್ತು ಎಂದರು.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











