Shiradi Ghat: ಹಾಸನದಿಂದ ದಕ್ಷಿಣಕನ್ನಡದಕ್ಕೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ನಲ್ಲಿ ರೈಲು- ರಸ್ತೆ ಸುರಂಗ ಮಾರ್ಗದ ಸಮೀಕ್ಷೆಗೆ ಕೇಂದ್ರ ಹೆದ್ದಾರಿ ಸಚಿವಾಲಯದಿಂದ ಸಮಿತಿ ರಚನೆ ಮಾಡಲಾಗಿದೆ.
ಎರಡೂ ಇಲಾಖೆಗಳ ಸಹಭಾಗಿತ್ವದಲ್ಲಿ ಜಂಟಿ ಸಮೀಕ್ಷೆ ನಡೆಸಲು ತಜ್ಞರ ಸಮಿತಿ ರಚಿಸುವಂತೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಕೇಂದ್ರ ಹೆದ್ದಾರಿ ಸಚಿವಾಲಯಕ್ಕೆ ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿದ ಕೇಂದ್ರ ಹೆದ್ದಾರಿ ಸಚಿವಾಲಯವು
ಶಿರಾಡಿ ಘಾಟ್ನಲ್ಲಿ ರೈಲು-ರೋಡ್ ಸುರಂಗ ಮಾರ್ಗದ ಸಮೀಕ್ಷೆಗೆ ಸಮಿತಿ ರಚನೆ ಮಾಡಲಾಗಿದೆ ಎಂದು ಬಿಜೆಪಿ ಸಂಸದ ಬ್ರಿಜೇಶ್ ಚೌಟ ಅವರಿಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಂದ ಮಾಹಿತಿ ಬಂದಿದೆ.
ಬ್ರಿಜೇಶ್ ಚೌಟ ಅವರಿಗೆ ಬರೆದ ಪತ್ರದಲ್ಲಿ ಏನಿತ್ತು..?
ಬೆಂಗಳೂರು-ಮಂಗಳೂರು ಹೈಸ್ಪೀಡ್ ಕಾರಿಡಾರ್ ಯೋಜನೆಯಡಿ ಶಿರಾಡಿ ಘಾಟ್ನಲ್ಲಿ ಹೆದ್ದಾರಿ ಹಾಗೂ ರೈಲ್ವೆ ಮಾರ್ಗ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವುದಕ್ಕೆ ಎರಡೂ ಇಲಾಖೆಗಳ ಸಹಭಾಗಿತ್ವದಲ್ಲಿ ಜಂಟಿ ಸಮೀಕ್ಷೆ ನಡೆಸಲು ತಜ್ಞರ ಸಮಿತಿ ರಚಿಸುವಂತೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಹೆದ್ದಾರಿ ಸಚಿವಾಲಯಕ್ಕೆ ಮನವಿ ಮಾಡಿದ್ದರು. ಈ ತಜ್ಞರ ಸಮಿತಿಯು ಶಿರಾಡಿ ಘಾಟ್ ಪ್ರದೇಶದಲ್ಲಿ ರೈಲು ಮತ್ತು ರಸ್ತೆ ಸಂಪರ್ಕಿತ ಸುರಂಗ ಮಾರ್ಗದ ಸಾಧ್ಯತೆ ಹಾಗೂ ಸಾಧಕ-ಬಾಧಕಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಲಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರ್ ಅವರು ಬ್ರಿಜೇಶ್ ಚೌಟ ಅವರಿಗೆ ಪತ್ರ ಬರೆದಿದ್ದಾರೆ.
ದಕ್ಷಿಣ ಕನ್ನಡದ ಬಹುದಿನದ ಕನಸು ನನಸಾಗಲು ಮೊದಲ ಹೆಜ್ಜೆ!
ಈ ಬಗ್ಗೆ ಸಂಸದ ಬ್ರಿಜೇಶ್ ಚೌಟ ಮಾತನಾಡಿ, ಬೆಂಗಳೂರು-ಮಂಗಳೂರು ಹೈಸ್ಪೀಡ್ ಕಾರಿಡಾರ್ ಯೋಜನೆ ದಕ್ಷಿಣ ಕನ್ನಡ ಜಿಲ್ಲೆಯ ಜನರ ಬಹುದಿನದ ಕನಸು ನನಸಾಗುವ ಮೊದಲ ಹೆಜ್ಜೆ. ಪರಿಸರ ಸೂಕ್ಷ್ಮತೆ ಮತ್ತು ಭೌಗೋಳಿಕ ಸಂಕೀರ್ಣತೆಯನ್ನು ಗಮನದಲ್ಲಿಟ್ಟುಕೊಂಡು ರಸ್ತೆ ಹಾಗೂ ರೈಲು ಹಳಿಗಳ ಅಭಿವೃದ್ದಿ ಕಾಮಗಾರಿಗೆ ರೈಲ್ವೇ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಂಟಿ ಸಮೀಕ್ಷೆ ಕೈಗೊಳ್ಳಲು ಮತ್ತು ಡಿಪಿಆರ್ ಮೇಲ್ವಿಚಾರಣೆಗೆ ತಜ್ಞರ ಸಮಿತಿ ನೇಮಿಸುವಂತೆ ಮನವಿ ಮಾಡಲಾಗಿತ್ತು. ನಮ್ಮ ಮನವಿಗೆ ತಕ್ಷಣ ಸ್ಪಂದಿಸಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಧನ್ಯವಾದಗಳು ಎಂದಿದ್ದಾರೆ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











