Mulki: ಖ್ಯಾತ ಯಕ್ಷಗಾನದ ಪ್ರಸಂಗಕರ್ತ, ಯಕ್ಷಗಾನ ಗುರು, ಛಂದೋಬ್ರಹ್ಮ ಖ್ಯಾತಿಯ ಗಣೇಶ್ ಕೊಲೆಕಾಡಿ (53) ನಿಧನರಾಗಿದ್ದಾರೆ. ಮೇರು ವ್ಯಕ್ತಿತ್ವದ ಮೂಲ್ಕಿ ಸಮೀಪದ ಕೊಲೆಕಾಡಿ ನಿವಾಸಿಯಾಗಿರುವ ಗಣೇಶ್ ದೀರ್ಘ ಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.
ಗಣೇಶ್ ಕೊಲೆಕಾಡಿ ಅವಿವಾಹಿತರಾಗಿದ್ದು ತಾಯಿ ಹಾಗೂ ಅಪಾರ ಬಂಧು ಬಳಗ ಹಾಗೂ ಯಕ್ಷಗಾನ ಕಲಾಭಿಮಾನಿಗಳನ್ನು ಅಗಲಿದ್ದಾರೆ. ಕ್ಲಿಷ್ಟ, ಸಂಕೀರ್ಣ ಛಂದಸ್ಸಿನಲ್ಲಿಯೂ ಲೀಲಾಜಾಲವಾಗಿ ಪದ್ಯರಚನೆ ಮಾಡುವ ಅತೀವ ಸಾಮಾರ್ಥ್ಯ ಹೊಂದಿದ್ದರು.
ಸರಿ ಸುಮಾರು 18 ವರ್ಷಗಳ ಹಿಂದೆ ಕಾರ್ಯ ನಿಮಿತ್ತ ಮುಂಬೈಗೆ ಹೋಗಿದ್ದ ವೇಳೆ ದುಷ್ಕರ್ಮಿಗಳಿಂದ ದಾಳಿಗೊಳಗಾಗಿ ಹಾಸಿಗೆ ಹಿಡಿಯುವಂತಾಗಿತ್ತು. ಅನಾರೋಗ್ಯದ ನಡುವೆಯೂ ನೂರಾರು ವಿದ್ಯಾರ್ಥಿಗಳಿಗೆ ಮನೆಯಲ್ಲಿ ಮಲಗಿಕೊಂಡೇ ಉಚಿತವಾಗಿ ಪಾಠ ಮಾಡಿ ಹಲವಾರು ಶಿಷ್ಯರನ್ನು ಬೆಳೆಸಿದ್ದಾರೆ. ನೂರಾರು ವಿದ್ಯಾರ್ಥಿಗಳಿಗೆ ಯಕ್ಷಗಾನದ ಭಾಗವತಿಕೆ, ಹಿಮ್ಮೇಳ ಕಲಿಸಿದ ಗುರುವಾಗಿದ್ದರು.
ಯಕ್ಷಗಾನ ಛಂದಸ್ಸಿನ ಕ್ಷೇತ್ರದಲ್ಲಿ ಯಕ್ಷಗಾನ ಕವಿ ನಾರಾಯಣ ಶೆಟ್ಟರ ಶಿಷ್ಯರಾಗಿದ್ದರು. ಗಣೇಶ ಕೊಲೆಕಾಡಿ ಪ್ರಸಂಗಕರ್ತ, ಕವಿ, ನಾಟಕಕಾರ ಹಾಗೂ ಯಕ್ಷಗಾನ ಹಿಮ್ಮೇಳದ ಸಮರ್ಥ ಗುರುವಾಗಿ ಖ್ಯಾತಗಳಿಸಿದ್ದರು. ದಿವಾಣ ಭೀಮ ಭಟ್ಟರ ಶಿಷ್ಯನಾಗಿದ್ದು, ಯಕ್ಷಗಾನ ಹಿಮ್ಮೇಳದಲ್ಲಿ ಸಮಗ್ರವಾದ ಜ್ಞಾನ ಹೊಂದಿದ್ದರು.
ಕುಂಜಾರಗಿರಿ ಕ್ಷೇತ್ರ ಮಾಹಾತ್ಮೆ, ಶಬರ ಕುಮಾರ, ಸಮರ ಸೌಗಂಧಿಕೆ,ಪಾಂಚಜನ್ಯ, ದೂರ್ವಾಸ ಗರ್ವಭಂಗ, ಶನೈಶ್ಚರ ಮಾಹಾತ್ಮ್ಯಂ, ಮೈಥಿಲಿ, ವಿಜಯಜನನಿ ಜಾಹ್ನವಿಯೇ ಮೊದಲಾದ 45ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳು, ಆರು ನಾಟಕಗಳು, ಕರುಳು ಕೊರಳು, ಕವನ ಸಂಕಲನ ಇವು ಗಣೇಶರ ಕೃತಿಗಳು. ಅಷ್ಟಲ್ಲದೆ 1000 ಕ್ಕೂ ಮಿಕ್ಕಿ ಕಾವ್ಯಾತ್ಮಕವಾದ ಸಮ್ಮಾನ ಪತ್ರಗಳನ್ನು ರಚಿಸಿದ್ದಾರೆ.
ಅನೇಕ ಕಮ್ಮಟ-ವಿಚಾರಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಗುರುವಾಗಿ, ಉಪನ್ಯಾಸಕನಾಗಿ ಭಾಗವಹಿಸಿದ್ದರು. ನಾನಾ ಪತ್ರಿಕೆಗಳಲ್ಲಿ ಲೇಖಕನಾಗಿಯೂ, ನಾಟಕ – ತಾಳಮದ್ದಲೆಗಳಲ್ಲಿ ಪಾತ್ರ ನಿರ್ವಹಿಸಿದ್ದರು.
ಕರ್ನಾಟಕ ಯಕ್ಷಗಾನ ಅಕಾಡಮಿಯ ಪಾರ್ತಿಸುಬ್ಬ ಪ್ರಶಸ್ತಿ, ಮುದ್ದಣ ಪ್ರಶಸ್ತಿ, ದಿವಾಣ ಭೀಮಭಟ್ಟ ಪ್ರಶಸ್ತಿ ಹೀಗೆ ಹತ್ತಾರು ಪ್ರಶಸ್ತಿಗಳು, ಯಕ್ಷಕಾವ್ಯ ಕಮಲಾರ್ಕ, ಯಕ್ಷ ಕುವಲಯಾಂಬುಧಿ ಚಂದ್ರ, ಕಲಾ ತಪಸ್ವಿಯೇ ಮುಂತಾದ ಬಿರುದುಗಳೂ ಸಂದಿದ್ದವು. ಉಡುಪಿ ಯಕ್ಷಗಾನ ಕಲಾರಂಗದವರು ಕೊಲೆಕಾಡಿಯವರಿಗೆ ಮನೆ ನಿರ್ಮಿಸಿಕೊಟ್ಟಿದ್ದರು. ಇವರ ಅಗಲುವಿಕೆ ಯಕ್ಷರಂಗಕ್ಕೆ ತುಂಬಲಾರದ ನಷ್ಟವಾಗಿದೆ.
ಇದನ್ನೂ ಓದಿ: Hair Health : ಈ ಎಣ್ಣೆಯನ್ನು ತಲೆಗೆ ಹಚ್ಚಿದರೆ ಬಿಳಿ ಕೂದಲು ಕಣ್ಮರೆ…!
==========================
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/AYP_nK8o1Rw?si=6gOb6xoMtg9GLTeu











