Youth congress: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ 25 ಲಕ್ಷಕ್ಕೂ ಹೆಚ್ಚು ಮತಗಳ್ಳತನ ನಡೆದಿದೆ ಎಂಬ ರಾಹುಲ್ ಗಾಂಧಿಯುವರು ಆರೋಪಕ್ಕೆ ಬೆಂಬಲ ವ್ಯಕ್ತಪಡಿಸಲು ರಾಜ್ಯ ಯುವ ಕಾಂಗ್ರೆಸ್ ಸಮಿತಿಯು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ನಿರ್ಲಕ್ಷ್ಯ ಹಾಗೂ ಜನರ ಮತಹಕ್ಕಿನ ಅಪಹರಣದ ವಿರುದ್ಧ ಈ ವೇಳೆ ಆಕ್ರೋಶ ವ್ಯಕ್ತಪಡಿಸಲಾಯಿತು.
ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ನೂರಾರು ಯುವ ಕಾಂಗ್ರೆಸ್ ಕಾರ್ಯಕರ್ತರು, ಜಿಲ್ಲಾ ಮತ್ತು ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು. “ಇದು ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೇಲೆ ನಡೆದ ಅತ್ಯಂತ ದೊಡ್ಡ ದಾಳಿ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವ ಮತ್ತು ಜನರ ಮತದ ಹಕ್ಕನ್ನು ಕಾಪಾಡಲು ಆಗ್ರಹಿಸಲಾಯಿತು.
ರಾಹುಲ್ ಗಾಂಧಿಯವರು ಪತ್ತೆ ಹಚ್ಚಿದ ಮೋಸವೇನು?
ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು “ಎಚ್-ಫೈಲ್ಸ್” (H-Files) ಎಂದು ಕರೆದಿರುವ ವರದಿಯನ್ನು ಬಿಡುಗಡೆ ಬುಧವಾರ ಮಾಡಿ, ಹರಿಯಾಣ ಚುನಾವಣೆಯಲ್ಲಿ ದೊಡ್ಡ ಮಟ್ಟದ “ವೋಟ್ ಚೋರಿ” (ಸರ್ಕಾರದ ಕಳ್ಳತನ) ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಹರಿಯಾಣದ ಒಟ್ಟು 2 ಕೋಟಿ ಮತದಾರರಲ್ಲಿ, 25 ಲಕ್ಷಕ್ಕೂ ಹೆಚ್ಚು ಮತಗಳು ನಕಲಿಯಾಗಿದ್ದು, ಇವುಗಳನ್ನು ಬಳಸಿ ಬಿಜೆಪಿ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಅಂದರೆ, ಪ್ರತಿ 8 ಮತದಾರರಲ್ಲಿ ಒಬ್ಬರು ನಕಲಿ ಎಂದು ಹೇಳಿದ್ದರು.
ಒಬ್ಬನೇ ವ್ಯಕ್ತಿಯು ಹಲವು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವುದು. ಅಸ್ತಿತ್ವದಲ್ಲಿಲ್ಲದ ವಿಳಾಸಗಳಲ್ಲಿ ಮತದಾರರ ನೋಂದಣಿ. ಒಂದೇ ವಿಳಾಸದಲ್ಲಿ 20ಕ್ಕೂ ಹೆಚ್ಚು ಮತದಾರರ ನೋಂದಣಿ. ಒಂದು ಮನೆಯಲ್ಲಿ 500ಕ್ಕೂ ಹೆಚ್ಚು ಮತದಾರರು ನೋಂದಣಿಯಾಗಿದ್ದರೂ, ಅದನ್ನು ಪರಿಶೀಲಿಸಿಲ್ಲ. ಬ್ರೆಜಿಲಿಯನ್ ಮಾಡೆಲ್‌ನ ಫೋಟೋವನ್ನು ಬಳಸಿ, 22 ಬೇರೆ ಬೇರೆ ಹೆಸರುಗಳಲ್ಲಿ 10 ಬೂತ್‌ಗಳಲ್ಲಿ ಮತ ಚಲಾಯಿಸಿದ್ದನ್ನು ಪತ್ತೆ ಹಚ್ಚಿ ವರದಿ ರೂಪದಲ್ಲಿ ಸಾರ್ವಜನಿಕರ ಮುಂದೆ ಇಟ್ಟಿದ್ದರು.
ಚುನಾವಣಾ ಆಯೋಗವು ಬಿಜೆಪಿಯೊಂದಿಗೆ “ಸಹಭಾಗಿತ್ವ” ಹೊಂದಿದ್ದು, ಈ ಅಕ್ರಮಗಳಿಗೆ ಸಹಕರಿಸಿದೆ. ನಕಲಿ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲು ವಿಫಲವಾಗಿದೆ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ನಾಶಪಡಿಸಿದೆ. ಚುನಾವಣೆಗೂ ಮುನ್ನ 3.5 ಲಕ್ಷ ಮತದಾರರ ಹೆಸರುಗಳನ್ನು, ಅದರಲ್ಲಿಯೂ ಬಹುತೇಕ ಕಾಂಗ್ರೆಸ್ ಬೆಂಬಲಿಗರ ಹೆಸರುಗಳನ್ನು, ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಸಾಮಾನ್ಯವಾಗಿ ಅಂಚೆ ಮತಗಳು ಮತ್ತು ನೇರ ಮತದಾನದ ಫಲಿತಾಂಶಗಳು ಒಂದೇ ದಿಕ್ಕಿನಲ್ಲಿರುತ್ತವೆ. ಆದರೆ, ಹರಿಯಾಣದಲ್ಲಿ ಕಾಂಗ್ರೆಸ್ ಅಂಚೆ ಮತಗಳಲ್ಲಿ 73 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ಬಿಜೆಪಿ ಕೇವಲ 17 ಸ್ಥಾನಗಳಲ್ಲಿತ್ತು. ಇದು ಹಿಂದೆಂದೂ ಆಗಿರಲಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











