Chikkamagaluru: ಸೀಝ್ ಮಾಡಿದ್ದ ಕಾರಿನಲ್ಲಿ ಲಕ್ಷಗಟ್ಟಲೆ ಹಣ, ಚಿನ್ನ, ಬೆಳ್ಳಿ ಪತ್ತೆಯಾಗಿದ್ದು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಒಂದು ತಿಂಗಳಿನಿಂದ ಪೊಲೀಸ್ ಠಾಣೆಯ ಆವರಣದಲ್ಲೇ ನಿಲ್ಲಿಸಿದ್ದ ಕಾರಿನಲ್ಲಿ ಲಕ್ಷಾಂತರ ಹಣ, ಬರೋಬ್ಬರಿ 60 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ, ಬೆಳ್ಳಿ ಸಿಕ್ಕಿದ್ದು ಪೊಲೀಸರು ತಲೆಬಿಸಿ ಮಾಡುಕೊಳ್ಳುವಂತಾಗಿದೆ. ಮಾಜಿ ಶಿಕ್ಷಣ ಸಚಿವರೊಬ್ಬರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಕಾರ್ ಒಂದನ್ನು ಸೀಝ್ ಮಾಡಲಾಗಿತ್ತು. ಇದೇ ಕಾರಿನ ಸೀಟ್ ಕೆಳಗೆ ಒಂದು ತಿಂಗಳ ಬಳಿಕ ಕೋಟಿ ಮೌಲ್ಯದ ಸೊತ್ತುಗಳು ಪತ್ತೆಯಾಗಿದ್ದನ್ನು ಕಂಡು ಪೊಲೀಸರು ಬೆಚ್ಚಿಬಿದ್ದಿದ್ದಾರೆ.
ಪೊಲೀಸರು ಸೀಜ್ ಮಾಡಿದ್ದ ಕಾರಣ ಒಂದು ತಿಂಗಳಿನಿಂದ ಪೊಲೀಸ್ ಠಾಣೆಯ ಆವರಣದಲ್ಲಿ ನಿಂತಿದ್ದ ಕಾರಿನಲ್ಲಿ ಲಕ್ಷಾಂತರ ರೂಪಾಯಿ ಹಣ, ಚಿನ್ನ ಮತ್ತು ಬೆಳ್ಳಿ ಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ನಡೆದಿದೆ. ಮಾಜಿ ಶಿಕ್ಷಣ ಸಚಿವ ದಿ .ಗೋವಿಂದೇಗೌಡರ ಮನೆಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ನೇಪಾಳಿ ಗ್ಯಾಂಗ್ ಅನ್ನು ಬಂಧಿಸಲಾಗಿತ್ತು. ಈ ವೇಳೆ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕಾರನ್ನು ಸೀಜ್ ಮಾಡಲಾಗಿತ್ತು. ಆದರೆ, ಈಗ ನ್ಯಾಯಾಲಯವು ಕಾರನ್ನು ರಿಲೀಸ್ ಮಾಡುವಂತೆ ಆದೇಶಿಸಿದೆ. ಈ ಹಿನ್ನಲೆ ಕಾರನ್ನು ಪರಿಶೀಲಿಸುವಾಗ ಲಕ್ಷ ಲಕ್ಷ ಮೌಲ್ಯ ಚಿನ್ನ ಮತ್ತು ಬೆಳ್ಳಿ, ಲಕ್ಷಗಟ್ಟಲೆ ಹಣ ಪತ್ತೆಯಾಗಿದೆ.
ಪೊಲೀಸರು ನಡೆಸಿದ ಪರಿಶೀಲನೆ ವೇಳೆ ಕಾರಿನ ಸೀಟ್ ಅಡಿಯಲ್ಲಿ 595 ಗ್ರಾಮ್ ಚಿನ್ನ, 589 ಗ್ರಾಂ ಬೆಳ್ಳಿ, 3,41,150 ರೂ. ಹಣ ಪತ್ತೆಯಾಗಿದೆ. ವಶಕ್ಕೆ ಪಡೆಯಲಾದ ಹಣ ಮತ್ತು ವಸ್ತುಗಳ ಮೌಲ್ಯ ಕೋಟಿಗೂ ಅಧಿಕವಾಗಿದೆ. ಕಳ್ಳತನವಾಗಿದ್ದ ಮೌಲ್ಯಕ್ಕಿಂದ ಅಧಿಕ ಚಿನ್ನ ಮತ್ತು ಬೆಳ್ಳಿ ಪತ್ತೆಯಾಗಿದೆ. ಹೀಗಾಗಿ ಗ್ಯಾಂಗ್ ಇನ್ನೂ ಹಲವೆಡೆ ಕೈಚಳಕ ತೋರಿರುವ ಅನುಮಾನಗಳು ವ್ಯಕ್ತವಾಗಿದ್ದು ಇದರಿಂದ ಮತ್ತೆ ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಆ.21ರಂದು ಬೆಳಗಿನ ಜಾವ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ ನಡೆದಿತ್ತು. ಮಾಜಿ ಸಚಿವ ಗೋವಿಂದೇಗೌಡ ಅವರ ಪುತ್ರ ಹಾಗೂ ಎಸ್ಟೇಟ್ ಮಾಲೀಕ ಹೆಚ್.ಜಿ. ವೆಂಕಟೇಶ್ ಮನೆಯಲ್ಲಿ ದರೋಡೆಯಾಗಿತ್ತು. 6 ಲಕ್ಷ ನಗದು ಮತ್ತು 37,50,000 ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ಕದ್ದು ಆರೋಪಿಗಳು ಪರಾರಿಯಾಗಿದ್ದರು.

ಆರೋಪಿಗಳಿಗೆ ಬಲೆ ಬೀಸಿದ್ದ ಪೊಲೀಸರು, ಸಾಂಗ್ಲಿಯಲ್ಲಿ ಮೂವರನ್ನು ಬಂಧಿಸಿದ್ದರು. ನೇಪಾಳದ ರಾಜೇಂದ್ರ, ಏಕೇಂದ್ರ ಕುಟಲ್ ಬದ್ವಾಲ್, ಕರಂ ಸಿಂಗ್ ಬಹಾದ್ದೂರ್ ಎಂಬುವರನ್ನು ವಶಕ್ಕೆ ಪಡೆದು ಒಂದೂವರೆ ಕೋಟಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ಕೃತ್ಯಕ್ಕೆ ಬಳಸಿದ ಎರಡು ಕಾರುಗಳನ್ನ ವಶಕ್ಕೆ ಪಡೆದಿದ್ದರು. ಈಗ ಮತ್ತೆ ಕಾರಿನ ಸೀಟ್ ಕೆಳಗೆ ಚಿನ್ನ, ಬೆಳ್ಳಿ, ನಗದು ಪತ್ತೆಯಾಗಿದ್ದು, ಮತ್ತಷ್ಟು ವಿಚಾರಣೆ ನಡೆಯುವ ಸಾಧ್ಯತೆಯಿದೆ.
ಇದನ್ನೂ ಓದಿ: Somawarpet: ದಯವಿಟ್ಟು ಗಮನಿಸಿ.. ಇಂದು ಎಲ್ಲೆಲ್ಲಿ ಕರೆಂಟ್ ಇರಲ್ಲ..?
====================
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/rHNt-vvvD9o?si=oE6YV4WTyyckN1vM











