ಬ್ರೇಕಿಂಗ್ ನ್ಯೂಸ್
ಕರ್ನಾಟಕರಾಜಕೀಯ

Malavika Avinash: ನ. 7ರಂದು ದೇಶದೆಲ್ಲೆಡೆ ವಂದೇ ಮಾತರಂ ಗೀತೆಯ ಸಾಮೂಹಿಕ ಗಾಯನ: ನಟಿ ಮಾಳವಿಕ ಅವಿನಾಶ್

Malavika Avinash: ನವೆಂಬರ್ 7ರಂದು ದೇಶದೆಲ್ಲೆಡೆ ವಂದೇ ಮಾತರಂ ಗೀತೆಯ ಸಾಮೂಹಿಕ ಗಾಯನ, ವಂದೇ ಮಾತರಂನ ಸಂಭ್ರಮ ಮೊಳಗಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ವಂದೇ ಮಾತರಂ 150ನೇ ವಾರ್ಷಿಕೋತ್ಸವದ ರಾಜ್ಯ ಸಂಚಾಲಕಿ, ನಟಿ ಮಾಳವಿಕ ಅವಿನಾಶ್ ಅವರು ತಿಳಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 7 ರಂದು ರಾಜ್ಯ ಕಾರ್ಯಾಲಯದಲ್ಲಿ 150ಕ್ಕೂ ಹೆಚ್ಚು ಜನರು ಅಂದರೆ ಸುಮಾರು 300-400 ಜನರು ಸೇರಿ ಒಟ್ಟಾಗಿ ವಂದೇ ಮಾತರಂ ಸಾಮೂಹಿಕ ಗಾಯನ ಮಾಡಲಿದ್ದೇವೆ. ಎಲ್ಲರೂ ಇದರಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು. ದೇಶಾದ್ಯಂತ ಎಲ್ಲಾ ಬಿಜೆಪಿ ಕಾರ್ಯಾಲಯಗಳಲ್ಲಿ ಸಾಮೂಹಿಕ ಗಾಯನ ನಡೆಯಲಿದೆ. ಪ್ರಧಾನಿಯವರೂ ಈ ಗಾಯನದಲ್ಲಿ ಸ್ವತಃ ಭಾಗವಹಿಸಲಿದ್ದಾರೆ ಎಂದರು.

150 ಜಿಲ್ಲೆಗಳಲ್ಲಿ ಆಚರಣೆಗೆ ಸಿದ್ಧತೆ !

ಬಿಜೆಪಿ ಪಕ್ಷ 150 ಜಿಲ್ಲೆಗಳಲ್ಲಿ ಆಚರಣೆಗೆ ನಿರ್ಧರಿಸಿದ್ದು, ಕರ್ನಾಟಕದ ಬೆಂಗಳೂರು, ಮೈಸೂರು, ಚಿತ್ರದುರ್ಗ, ಬಾಗಲಕೋಟೆ, ಗದಗ, ಕಲಬುರ್ಗಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವಂದೇ ಮಾತರಂ ಸಾಮೂಹಿಕ ಗಾಯನ ಇರುತ್ತದೆ ಎಂದರು. 1875ರಲ್ಲಿ ಬಂಕಿಂಚಂದ್ರ ಚಟ್ಟೋಪಾಧ್ಯಾಯರು ವಂದೇ ಮಾತರಂ ಗೀತೆ ರಚಿಸಿದ್ದಾರೆ. ಈ ಗೀತೆಗೆ ಇದೀಗ 150ರ ಸಂಭ್ರಮ. ಕೇಂದ್ರದ ಎನ್‍ಡಿಎ ಸರಕಾರವು ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶಾದ್ಯಂತ ವಂದೇ ಮಾತರಂ ಆಚರಣೆಗೆ ಸೂಚಿಸಿದೆ. ಸ್ವಾತಂತ್ರ್ಯ ಸಂಗ್ರಾಮದ ಮೂಲಮಂತ್ರ ಇದಾಗಿತ್ತು ಎಂದರು.

ಈ ಗೀತೆ ಹಾಡುವ ಮೂಲಕ ಆಚರಣೆ ಮಾಡಲು ಕೇಂದ್ರ ಸಚಿವ ಸಂಪುಟ ಸಭೆ ನಿರ್ಣಯಿಸಿದೆ. ನವೆಂಬರ್ 7ರಂದು ದೇಶದೆಲ್ಲೆಡೆ ವಂದೇ ಮಾತರಂ ಗೀತೆಯ ಸಾಮೂಹಿಕ ಗಾಯನ, ವಂದೇ ಮಾತರಂನ ಸಂಭ್ರಮ ನಡೆಯಲಿದೆ. 1896ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಟಾಗೋರ್ ಅವರು ಈ ಹಾಡು ಜನಮನದಲ್ಲಿ ಇನ್ನೂ ಹೆಚ್ಚು ನಿಲ್ಲುವ ಹಾಗೆ ಹಾಡಿ ಅದಕ್ಕೆ ಹೆಚ್ಚಿನ ಪ್ರಚಾರ ದೊರಕಿತ್ತು ಎಂದರು.

ಕಾಂಗ್ರೆಸ್ ಪಕ್ಷವು ವಂದೇ ಮಾತರಂ ಅನ್ನು ಕೈಬಿಟ್ಟಿತ್ತು.!

20ನೇ ಶತಮಾನದ ಪ್ರಾರಂಭದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಘೋಷವಾಕ್ಯವಾಗಿ ಈ ಗೀತೆಯನ್ನು ಬಳಸಲಾಗಿತ್ತು. ಬ್ರಿಟಿಷರ ವಿರೋಧ, ಚಳವಳಿಗಳಲ್ಲಿ ವಂದೇ ಮಾತರಂ ಘೋಷಣೆ ಕೂಗುತ್ತಿದ್ದರು ಎಂದು ನೆನಪಿಸಿದರು. 1923ರ ಕಾಂಗ್ರೆಸ್ ಪಕ್ಷದ ಅಧಿವೇಶನದಲ್ಲಿ ವಂದೇ ಮಾತರಂ ಗೀತೆಯ ಕೆಲವು ಸಾಲುಗಳಿಗೆ ಪ್ರತಿರೋಧ ಬಂದಿತ್ತು ಎಂದು ತಿಳಿಸಿದರು. ಡಾ.ಮೌಲಾನಾ ಆಜಾದ್ ಅವರು ಪ್ರತಿರೋಧ ತೋರಿದ್ದರು. ಪೂರ್ಣ ಗೀತೆಯಲ್ಲಿ ‘ತ್ವಂ ಹೀ ದುರ್ಗ ದಶಪ್ರಹರಣ ಧಾರಿಣಿ’ ಎಂಬ ಸಾಲಿನಿಂದ ಅಲ್ಪಸಂಖ್ಯಾತರಿಗೆ ಬೇಸರವಾಗುತ್ತದೆ ಎಂಬ ಚರ್ಚೆ ನಡೆದು ಕಾಂಗ್ರೆಸ್ ಪಕ್ಷವು ವಂದೇ ಮಾತರಂ ಅನ್ನು ಕೈಬಿಟ್ಟಿತ್ತು ಎಂದರು.

ಸಚಿವಾಲಯದಲ್ಲಿ ಹಾಡಬಾರದೆಂದು ಕಾಂಗ್ರೆಸ್ ರಾಜಕೀಯ ಮಾಡಿತ್ತು..!

1950ರಲ್ಲಿ ಡಾ.ರಾಜೇಂದ್ರ ಪ್ರಸಾದ್ ಅವರು ಸಂಯುಕ್ತ ಅಸೆಂಬ್ಲಿಯಲ್ಲಿ ಜನಗಣಮನಕ್ಕೆ ಎಷ್ಟು ಗೌರವ ನೀಡಲಾಗುತ್ತದೋ ಅದೇರೀತಿ ರಾಷ್ಟ್ರದ ಹಾಡು ವಂದೇ ಮಾತರಂಗೆ ಗೌರವ ಸಲ್ಲಬೇಕೆಂದು ತಿಳಿಸಿದ್ದರು. 2019ರಲ್ಲಿ ಮಧ್ಯ ಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರವು ವಂದೇ ಮಾತರಂ ಅನ್ನು ಸಚಿವಾಲಯದಲ್ಲಿ ಹಾಡಬಾರದೆಂದು ನಿಷೇಧ ಹೇರಿತ್ತು ಎಂದರು. ಇದು ಕಾಂಗ್ರೆಸ್ ರಾಜಕೀಯ, ನಮಗೆ ವಂದೇ ಮಾತರಂ ಅತ್ಯಂತ ಪೂಜನೀಯ ಎಂದರು.

ಕೊಲೆ, ಮಹಿಳಾ ದೌರ್ಜನ್ಯ ಹೆಚ್ಚಳವಾಗ್ತಿದೆ..ಮಾಳವಿಕಾ ಬೇಸರ!

ಕರ್ನಾಟಕದಲ್ಲಿ ಮಹಿಳೆಯರ ಮೇಲೆ ಸತತ ಕೊಲೆ ಮತ್ತಿತರ ದೌರ್ಜನ್ಯ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇದನ್ನು ಪ್ರಶ್ನಿಸುವ ಅನಿವಾರ್ಯತೆಯೂ ಇದೆ ಎಂದು ಅವರು ನುಡಿದರು. ಬೆಂಗಳೂರಿನಲ್ಲಿ ಅಕ್ಟೋಬರ್ 27ಕ್ಕೆ ಮಹಿಳೆ ಮೇಲೆ ಪೊಲೀಸರಿಂದಲೇ ದಾಳಿ ನಡೆದುದು ದುರದೃಷ್ಟಕರ, ಬಳಿಕ ಆಟೋದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಅಕ್ಟೋಬರ್ 17ರಂದು ಬ್ರೆಝಿಲ್‍ನ ಮಾಡೆಲ್ ಮೇಲೆ ದೌರ್ಜನ್ಯ ನಡೆದಿದೆ. ಮನೆಯಲ್ಲಿ ನುಗ್ಗಿ ದರೋಡೆ ಮಾಡಿ, ದೌರ್ಜನ್ಯ- ಕೊಲೆ, ಎಂಜಿನಿಯರರಿಂಗ್ ಕಾಲೇಜಿನ ಹುಡುಗಿ ಮೇಲೆ ಶೌಚಾಲಯದಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.ಈ ವೇಳೆ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು. ಮಂಜುಳ, ವಂದೇ ಮಾತರಂ 150ನೇ ವಾರ್ಷಿಕೋತ್ಸವದ ರಾಜ್ಯ ಸಹ-ಸಂಚಾಲಕಿ ಶ್ಯಾಮಲ ಕುಂದರ್ ಅವರು ಭಾಗವಹಿಸಿದ್ದರು.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page