Sullia : ಸೇವಾ ರೂಪದಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆ ಮಾಡುವ ಬೆಳ್ಳಿರಥ ಮಂಗಳವಾರ ರಾತ್ರಿ ಸುಳ್ಯಕ್ಕೆ ಆಗಮಿಸಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಇದರ ಅಧ್ಯಕ್ಷರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರು ಡಾ.ರೇಣುಕಾಪ್ರಸಾದ್ ಕೆ.ವಿ. ದೇವರಿಗೆ ಸಮರ್ಪಿಸಲಿರುವ ಬೆಳ್ಳಿರಥದ ಯಾತ್ರೆಯು ಬೆಳಿಗ್ಗೆ ಕೋಟೇಶ್ವರದಿಂದ ಆರಂಭಗೊಂಡು ನಿನ್ನೆ ರಾತ್ರಿ ಸುಳ್ಯಕ್ಕೆ ಆಗಮಿಸಿದಾಗ ರಥಕ್ಕೆ ಭವ್ಯ ಸ್ವಾಗತ ನೀಡಲಾಯಿತು.
ಸಾವಿರಾರು ಮಂದಿ ರಥವನ್ನು ಕಣ್ತುಂಬಿಕೊಂಡು ಭಕ್ತಿ ಭಾವದಿಂದ ಸ್ವಾಗತಿಸಿದರು. ಸುಳ್ಯ ನಗರದ ಜ್ಯೋತಿ ವೃತ್ತದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ ಜನರು ಆರತಿ ಎತ್ತಿ, ಪುಷ್ಪಾರ್ಚನೆ ಮಾಡಿದರು. ಪೂರ್ಣಕುಂಭ ಸ್ವಾಗತ ನೀಡಿ ಕುಕ್ಕೆ ಪುರಾಧೀಶನಿಗೆ ಸಮರ್ಪಣೆಯಾಗುವ ರಥವನ್ನು ಸುಳ್ಯಕ್ಕೆ ಬರ ಮಾಡಿಕೊಳ್ಳಲಾಯಿತು.
ಮಾಜಿ ಸಚಿವ ಎಸ್.ಅಂಗಾರ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಸೇರಿದಂತೆ ಪ್ರಮುಖರು ಆಗಮಿಸಿ ರಥಕ್ಕೆ ಸ್ವಾಗತ ಕೋರಿದರು. ಸೋಮವಾರ ರಾತ್ರಿ ಗುತ್ತಿಪೂಜೆ ನಡೆದು ರಥವನ್ನು ಶಾಸ್ತ್ರೋಕ್ತವಾಗಿ ಡಾ.ರೇಣುಕಾಪ್ರಸಾದ್ ಕೆ.ವಿ. ಹಾಗೂ ಮನೆಯವರಿಗೆ ಹಸ್ತಾಂತರ ಮಾಡುವ ಕಾರ್ಯಕ್ರಮ ನಡೆದಿತ್ತು. ಅಲ್ಲದೇ, ರಥಯಾತ್ರೆಗೆ ಉಡುಪಿ, ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು.
ಡಾ.ರೇಣುಕಾಪ್ರಸಾದ್ ಕೆ.ವಿ, ಡಾ.ಜ್ಯೋತಿ ಆರ್.ಪ್ರಸಾದ್, ಡಾ.ಅಭಿಜ್ಞಾ, ಮೌರ್ಯ ಆರ್.ಕುರುಂಜಿ, ಪ್ರಮುಖರು, ಕೆವಿಜಿ ಶಿಕ್ಷಣ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.
ಕೋಟೇಶ್ವರದಿಂದ ಆರಂಭಗೊಂಡ ಬೆಳ್ಳಿರಥ ಯಾತ್ರೆ ಕುಂಭಾಶಿ, ಉಡುಪಿ, ಸುರತ್ಕಲ್, ಮಂಗಳೂರು, ಬಿಸಿ ರೋಡ್, ಕಬಕ, ಪುತ್ತೂರು, ಕುಂಬ್ರ, ಕನಕಮಜಲು, ಜಾಲ್ಸೂರು, ಪೈಚಾರ್ ಮೂಲಕ ಹಾದು ಬಂದು ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಸ್ವಾಗತವನ್ನು ಸ್ವೀಕರಿಸಿ ಸುಳ್ಯಕ್ಕೆ ಆಗಮಿಸಿತು.ನ.5ರಂದು ಬೆಳಿಗ್ಗೆ ಶ್ರೀ ಗುತ್ಯಮ್ಮ ಕ್ಷೇತ್ರದಿಂದ ಹೊರಟು ಬೆಳ್ಳಿರಥ ಯಾತ್ರೆ ಕೆವಿಜಿ ಸರ್ಕಲ್ ಬಳಿಯಿಂದ ವಿವಿಧ ವೈಧಿಕ ಮತ್ತು ಸಾಂಸ್ಕೃತಿಕ ಮೆರವಣಿಗೆಯೊಂದಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೊರಡಲಿದೆ. ಬೆಳ್ಳಿರಥವನ್ನು ನ.10ರಂದು ಶಾಸ್ತ್ರೋಕ್ತವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆ ಮಾಡಲಾಗುತ್ತದೆ
ಇದನ್ನೂ ಓದಿ : Mangaluru: ಕಪ್ಪು ಚಿರತೆ ಸಂಚಾರ – ಸಿಸಿಟಿವಿಯಲ್ಲಿ ದೃಶ್ಯ ಸೆರೆ
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/ecLc8CzYwLs?si=vDKDfNx9uUuZJSN2











