Udupi: ಬೀದಿನಾಯಿಗಳ ಹಾವಳಿಯಿಂದ ದಿನಕ್ಕೆ ಹಲವಾರು ಮಂದಿ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಉಡುಪಿ ನಗರ ಸಭೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಬೀದಿನಾಯಿಗಳಿಗೆ ಆಹಾರ ನೀಡುವ ಮಂದಿಗೆ ಹಾಗೂ ನಾಯಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಡುವ ಮಂದಿಯ ವಿರುದ್ಧ ಕ್ರಮಕ್ಕೆ ಉಡುಪಿ ನಗರ ಸಭೆ ತೀರ್ಮಾನಿಸಿದೆ.
ಉಡುಪಿ ನಗರಸಭಾ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳಿಗೆ ಆಹಾರವನ್ನು ನೀಡುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿವೆ. ಈ ಹಿನ್ನೆಲೆ ಬೀದಿ ನಾಯಿಗಳಿಗೆ ಅನಧಿಕೃತವಾಗಿ ಚರಂಡಿಗಳ ಮೇಲೆ, ಶಾಲಾ ವಠಾರದಲ್ಲಿ, ಜನ ನಿಬಿಡ ಪ್ರದೇಶಗಳಲ್ಲಿ, ಬಸ್ ನಿಲ್ದಾಣ ಸೇರಿದಂತೆ ಇನ್ನಿತರ ಯಾವುದೇ ಸ್ಥಳಗಳಲ್ಲಿ ಸಾರ್ವಜನಿಕರು ಆಹಾರ ನೀಡಬಾರದು ಎಂದು ನಗರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.
ನಗರಸಭೆಯಿಂದ ಪ್ರಾಥಮಿಕ ಹಂತದಲ್ಲಿ , ಆದಿ ಉಡುಪಿ ಮಾರುಕಟ್ಟೆ ಹಿಂಬದಿ, ಬೀಡಿನಗುಡ್ಡೆ ಹಿಂದೂ ರುದ್ರ ಭೂಮಿ ಮುಂಭಾಗ, ಇಂದ್ರಾಳಿ ಹಿಂದೂ ರುದ್ರಭೂಮಿ ಮುಂಭಾಗ, ಪರ್ಕಳ ಸ್ವಾಗತ ಗೋಪುರದ ಹತ್ತಿರ, ಪೆರಂಪಳ್ಳಿ ಮುಖ್ಯ ರಸ್ತೆಯ ಭಾರತೀಯ ವಿಕಾಸ ಟ್ರಸ್ಟ್ ಕೆಳಗಡೆ, ನಿಟ್ಟೂರು ಕೊಳಚೆ ನೀರು ಶುದ್ದೀಕರಣ ಘಟಕದ ಎದುರುಗಡೆ, ಆದಿಉಡುಪಿ ಮಲ್ಪೆ ರಸ್ತೆಯ ಹೆಲಿಪ್ಯಾಡ್ ಹತ್ತಿರ, ರಾಜ್ ಫಿಶ್ ಮಿಲ್ ಹತ್ತಿರ, ಕಕ್ಕುಂಜೆ ನಾರಾಯಣನಗರಕ್ಕೆ ಹೋಗುವ ರಸ್ತೆಯ ತಿರುವು ಬಳಿ ಹಾಗೂ ಬೈಲೂರು ಹನುಮಾನ್ ಗ್ಯಾರೇಜ್ ಡಯಾನ ರಸ್ತೆ ಜಯವೀರ ಸಂಘದ ಹತ್ತಿರ ನಿಯಮಾನುಸಾರ ಷರತ್ತು ವಿಧಿಸಿ, ಬೀದಿ ನಾಯಿಗಳಿಗೆ ಆಹಾರ ಹಾಕಲು ಅನುಮತಿಯನ್ನು ನೀಡಲು ಸ್ಥಳಗಳನ್ನು ಗುರುತಿಸಲಾಗಿದೆ.
ಆಹಾರ ಹಾಕುವವರಿಗೆ ಅನುಮತಿ ಕಡ್ಡಾಯ
ಇನ್ನಿತರ ಯಾವುದೇ ನಿಗದಿತ ಸ್ಥಳಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕಲು ಸಾರ್ವಜನಿಕರಿಗೆ ಆಸಕ್ತಿಯಿದ್ದಲ್ಲಿ ನಗರಸಭೆಗೆ ಲಿಖಿತ ಮನವಿ ಸಲ್ಲಿಸಬಹುದು. ಆಹಾರ ಹಾಕುವವರಿಗೆ ಅನುಮತಿ ಹಾಗೂ ಗುರುತಿನ ಚೀಟಿ ಕಡ್ಡಾಯವಾಗಿದೆ. ಆಹಾರ ಹಾಕುವವರೇ ಸದರಿ ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಿಸಬೇಕು. ಅಲ್ಲದೆ, ಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸಬೇಕು. ಇದೂ ಸಹ ನಾಯಿಗಳಿಗೆ ತಿಂಡಿ ಕೊಡುವವರ ಹೊಣೆಯಾಗಿದೆ ಎಂದು ನಗರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.
ಕಾನೂನು ಕ್ರಮದ ಎಚ್ಚರಿಕೆ
ಮನೆಗಳಲ್ಲಿ ನಾಯಿ ಸಾಕುವವರು ಮರಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಡುವುದು ಕಂಡು ಬಂದಿದೆ. ಆದ್ದರಿಂದ ಬೀದಿ ನಾಯಿಗಳ ಸಂಖ್ಯೆ ಹೆಚ್ಚಳವಾಗಿದೆ. ಮನೆಗಳಲ್ಲಿ ಸಾಕುವ ನಾಯಿಗಳಿಗೂ ರೇಬಿಸ್ ಲಸಿಕೆ ಹಾಗೂ ಸಂತಾನಹರಣ ಚಿಕಿತ್ಸೆ ಮಾಡಬೇಕು. ಅವುಗಳ ಕುತ್ತಿಗೆಗೆ ಬೆಲ್ಟ್ ಅಳವಡಿಸಬೇಕು. ಸಾಕು ನಾಯಿ ಅಥವಾ ಮರಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟಿರುವುದು ಕಂಡು ಬಂದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆಯ ಪೌರಾಯುಕ್ತ ಮಹಾಂತೇಶ ಹಂಗರಗಿ ಎಚ್ಚರಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ: Accident : ಅಪಘಾತಕ್ಕೀಡಾಗಿ ಇತ್ತೀಚೆಗಷ್ಟೇ ನಿಧನರಾದ ಅಪೂರ್ವ ಭಟ್ ರ ತಂದೆಯೂ ನಿಧನ
==============================
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/9SPfLPmVEeU?si=RMl06TK3WLJqGFGS











