Somwarpet: ಕೊಡಗು ಜಿಲ್ಲೆಯ ಸೋಮವಾರಪೇಟೆ ಪಟ್ಟಣದಲ್ಲಿ ದಾಖಲೆಗಳ ಸಮಸ್ಯೆ & ಅರಣ್ಯ ಇಲಾಖೆಯ ದೌರ್ಜನ್ಯ ವಿರುದ್ಧ ರೈತರ ಬೃಹತ್ ಹೋರಾಟ ನಡೆಸಿದ್ದಾರೆ.
ಸೋಮವಾರಪೇಟೆ ರೈತ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಪ್ರತಿಭಟನಾ ಸಭೆಯಲ್ಲಿ ರೈತ ಮುಖಂಡರಾದ ಹನೂರು ಪ್ರಕಾಶ್, ಬನ್ನೂರು ಮಂಜು ಕಿರಣ್ ಭಾಗಿಯಾಗಿದ್ದಾರೆ. ರೈತ ಸಂಘದ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಚಕ್ರವರ್ತಿ ಸುರೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಸೋಮವಾರಪೇಟೆ ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ರೈತರಿಂದ ಮಾನವ ಸರಪಳಿ ರಚನೆ ಮಾಡಲಾಗಿದ್ದು, ಸೋಮವಾರಪೇಟೆ ಪಟ್ಟಣದ ಜೆಸಿ ವೇದಿಕೆಯಲ್ಲಿ ಪ್ರತಿಭಟನಾ ಸಭೆ ನಡೆದಿದೆ.
ಇದನ್ನೂ ಓದಿ: ಪ್ರಬಲ ಭೂಕಂಪ – 10 ಮಂದಿ ದಾರುಣ ಸಾವು
ಈ ಹಿಂದೆ ಅರಣ್ಯಾಧಿಕಾರಿಗಳು- ರೈತ ಮುಖಂಡರ ಧಿಡೀರ್ ಸಭೆ ನಡೆದಿತ್ತು..!
ಕಳೆದ ದಿನ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಕೊಡಗು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಅವರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು.
ರೈತರ ನೆಮ್ಮದಿ ಕಸಿಯುವಂತೆ ಮಾಡಿರುವ ಸಿ ಮತ್ತು ಡಿ ಜಾಗ ಸಮಸ್ಯೆ, ಸೆಕ್ಷನ್-೪ ನೋಟಿಫಿಕೇಷನ್, ಡೀಮ್ಡ್ ಫಾರೆಸ್ಟ್ ಅಧಿಸೂಚನೆಯ ಗೊಂದಲಗಳ ಬಗ್ಗೆ ಚರ್ಚೆ ನಡೆಸಲು ದಿಢೀರ್ ಆಯೋಜಿಸಿದ್ದ ಅರಣ್ಯಾಧಿಕಾರಿಗಳು-ರೈತ ಮುಖಂಡರ ಸಭೆಯಲ್ಲಿ ಮೂರು ಗಂಟೆಗೂ ಅಧಿಕ ಕಾಲ ಮಾತುಕತೆ ನಡೆದರೂ ಪರಿಪೂರ್ಣ ಫಲಿತಾಂಶ ಬರಲಿಲ್ಲ.
ಅರಣ್ಯ ಇಲಾಖೆಯು ಏಕಾಏಕಿ ಸರ್ವೆ ಕಾರ್ಯ ನಡೆಸುವ ಮೂಲಕ ರೈತರಿಗೆ ಕಿರುಕುಳ ನೀಡುತ್ತಿದೆ. ಪೈಸಾರಿ ಜಾಗವನ್ನು ಏಕಾಏಕಿ ಅರಣ್ಯ ಎಂದು ಮಾಡಲಾಗುತ್ತಿದೆ. ಸಿ ಮತ್ತು ಡಿ ಜಾಗದ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಹಲವಾರು ಬಾರಿ ಮನವಿ ಸಲ್ಲಿಸಿ, ಪ್ರತಿಭಟನೆ, ಬಂದ್ ಮಾಡಿದ್ದರೂ ಸರ್ಕಾರದಿಂದ ಸ್ಪಂದನೆಯಿಲ್ಲ. ಈ ಹಿನ್ನೆಲೆ ಹೋರಾಟಕ್ಕೆ ಉಗ್ರ ರೂಪ ನೀಡಬೇಕೆಂದು ಕಳೆದ ತಾ. ೨೭ರ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿತ್ತು.
ಈ ಸಭೆಯ ವರದಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ರೈತರು ಅರಣ್ಯ ಇಲಾಖೆಯ ಬಗ್ಗೆ ಅನಗತ್ಯ ಭಯ ಪಡುವಂತಾಗಿದೆ. ತಪ್ಪು ಗ್ರಹಿಕೆಯ ಮಾಹಿತಿಗಳು ಪ್ರಕಟವಾಗಿವೆ ಎಂದು ಭಾವಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಈ ಬಗ್ಗೆ ಸ್ಪಷ್ಟನೆ ನೀಡಲು ಸಭೆ ಆಯೋಜಿಸಿದ್ದರು. ಸಭೆಯ ಆರಂಭದಲ್ಲಿ ಮಾತನಾಡಿದ ಎಸಿಎಫ್ ಗೋಪಾಲ್ ಅವರು, ಮಾಧ್ಯಮಗಳಲ್ಲಿ ತಪ್ಪು ಗ್ರಹಿಕೆಯ ವರದಿ ಪ್ರಕಟವಾಗಿದ್ದು, ಇದಕ್ಕೆ ಸ್ಪಷ್ಟನೆ ನೀಡಲು ಸಭೆ ಕರೆಯಲಾಗಿದೆ ಎಂದರು.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











